ಬೆಂಗಳೂರು, ಸೆ.12 (DaijiworldNews/AK: ಈ ಭ್ರಷ್ಟ ಸರಕಾರ ಕೋಮುಗಲಭೆಗಳಿಗೆ ಕುಮ್ಮಕ್ಕು ಕೊಡುವುದರ ಮೂಲಕ ಗಲಭೆಕೋರರ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಗಲಭೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ನಾಗಮಂಗಲದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ನಿನ್ನೆ ಗಲಭೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಅವರು, ಅಂಗಡಿಗಳನ್ನು ಸುಟ್ಟಿರುವ ಕುರಿತಂತೆ ಮಾಹಿತಿ ಪಡೆದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸುಟ್ಟು ಹೋದ ಅಂಗಡಿಗಳ ಸಂಬಂಧ ರಾಜ್ಯ ಸರಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋದ ಕುರಿತು ಜನರು ಮಾತನಾಡುತ್ತಿದ್ದಾರೆ ಎಂದರು.
ನಾಗಮಂಗಲದಲ್ಲಿ ಗಣೇಶನ ವಿಗ್ರಹದ ಶಾಂತಿಯುತ ಮೆರವಣಿಗೆ ಸಂದರ್ಭದಲ್ಲಿ ದೇಶದ್ರೋಹಿಗಳಿಂದ ಪೂರ್ವನಿಯೋಜಿತ ಕೃತ್ಯ ನಡೆದಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ತಳವಾರಿನೊಂದಿಗೆ ಬೀದಿಗೆ ಬಂದು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದೆ. ವಾಹನಗಳ ಷೋರೂಂ, ಬಟ್ಟೆ ಅಂಗಡಿ ಸುಡಲಾಗಿದೆ. ಇದೆಲ್ಲವೂ ಪೂರ್ವಯೋಜಿತ ದುಷ್ಕಂತ್ಯ ಎಂದು ಆಕ್ಷೇಪಿಸಿದರು.
ಇಷ್ಟಾದರೂ ಸಹ ಪೊಲೀಸರು ಕೈಕಟ್ಟಿಕೊಂಡು ಎಲ್ಲವನ್ನೂ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು ಎಂದರೆ, ಆಡಳಿತ ಪಕ್ಷದ ಒತ್ತಡವೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಹಿಂದೆ ಕೆರೆಗೋಡಿನಲ್ಲಿ ಹನುಮಧ್ವಜವನ್ನು ಇಳಿಸುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯನವರ ನೇತೃತ್ವದ ಹಿಂದೂವಿರೋಧಿ ಕಾಂಗ್ರೆಸ್ ಸರಕಾರದ ನಡವಳಿಕೆ ಪರಿಣಾಮವಾಗಿ ದೇಶದ್ರೋಹಿಗಳು ಅಟ್ಟಹಾಸದಿಂದ ಮೆರೆಯುವಂತಾಗಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಇಂಥ ಘಟನೆಗಳು ಜಾಸ್ತಿ ಆಗುತ್ತಿವೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು, ಆಗಿರುವ ಸಂಪೂರ್ಣ ನಷ್ಟವನ್ನು ಭರಿಸಬೇಕು. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಲಾಂಗು, ಮಚ್ಚು ಹಿಡಿದ ಅವರು ನಿಮ್ಮ ಮನೆಗೂ ನುಗ್ಗುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸಚಿವರು, ಶಾಸಕರ ಮನೆಗಳಿಗೂ ನುಗ್ಗುವ ದಿನ ದೂರ ಇಲ್ಲ ಎಂದು ತಿಳಿಸಿದರು. ನಿಮ್ಮ ‘420’ ರಾಜಕಾರಣವನ್ನು ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ಅವರು ಒತ್ತಾಯಿಸಿದರು. ಬಂಧಿತ ಹಿಂದೂಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನಷ್ಟಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.