ನವದೆಹಲಿ, ಸೆ.13(DaijiworldNews/AA): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ದೊರೆತಿದ್ದರೂ ಸಿಎಂ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.
ಅಬಕಾರಿ ನೀತಿಯಲ್ಲಿ ಅಕ್ರಮದ ಆರೋಪದ ಮೇಲೆ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ಕೇಜ್ರಿವಾಲ್ಗೆ ಇಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಆದೇಶ ಪ್ರಕಟಿಸಿದ್ದ ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ, 10 ಲಕ್ಷದ ಬಾಂಡ್ ಸಲ್ಲಿಸಬೇಕು, ಅಧೀನ ನ್ಯಾಯಲಯದ ಮುಂದೆ ವಿಚಾರಣೆಗೆ ಗೈರಾಗಬಾರದು, ಮಾಹಿತಿ ನೀಡದೇ ದೇಶ ತೊರೆಯಬಾರದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಷರತ್ತು ವಿಧಿಸುವ ಮೂಲಕ ತೀರ್ಪು ನೀಡಿದೆ.
ಪ್ರಕರಣದ ಬಗ್ಗೆ ಪ್ರತ್ಯೇಕ ತೀರ್ಪು ನೀಡಿದ ನ್ಯಾ. ಉಜ್ಜಲ್ ಭುಯಾನ್ ಅವರು, ಕಳೆದ ವರ್ಷ ಮಾರ್ಚ್ ನಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದರೂ ಸಿಬಿಐಗೆ ಎಲ್ಲೂ ಬಂಧನ ಅಗತ್ಯ ಕಾಣಲಿಲ್ಲ, ಆದರೆ ಇಡಿ ಪ್ರಕರಣದಲ್ಲಿ ಜಾಮೀನು ಪಡೆಯುತ್ತಿದ್ದಂತೆ ಸಿಬಿಐ ಸಕ್ರೀಯವಾಗಿದೆ. 22 ತಿಂಗಳು ಸುಮ್ಮನಿದ್ದ ಸಿಬಿಐ ಏಕಾಏಕಿ ಕಸ್ಟಡಿಗೆ ಕೇಳುವುದು ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಸಿಬಿಐ ಪಂಜರದ ಗಿಳಿಯಂತೆ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.
ಇನ್ನು ಪ್ರಕರಣದ ಬಗ್ಗೆ ಆದೇಶ ನೀಡಿದ ನ್ಯಾ. ಸೂರ್ಯಕಾಂತ್ ಅವರು, ಮೊದಲ ಎಫ್ಐಆರ್ ಆಗಸ್ಟ್ 2022 ರಲ್ಲಿ ದಾಖಲಿಸಲಾಗಿದೆ ಮತ್ತು 4 ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಇದು ಒಳಪಟ್ಟಿದ್ದು, 17 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಶೀಘ್ರದಲ್ಲಿ ವಿಚಾರಣೆ ಅಂತ್ಯವಾಗುವ ಲಕ್ಷಣಗಳಿಲ್ಲದ ಕಾರಣ ಜಾಮೀನು ನೀಡಲಾಗುತ್ತಿದೆ. ಆದರೆ ಸಿಬಿಐ ಬಂಧನ ಕಾನೂನು ಬಾಹಿರ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.