ಬೆಂಗಳೂರು, ಸೆ.13 (DaijiworldNews/AK): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು, ಇದನ್ನು ದೇಶ ಗಂಭೀರವಾಗಿ ಪರಿಗಣಿಸುತ್ತಿದೆ. ರಾಹುಲ್ ಗಾಂಧಿಯವರ ಮಾತುಗಳು ಸುಳ್ಳಿನಿಂದ ಕೂಡಿರುವುದಷ್ಟೇ ಅಲ್ಲದೆ, ಭಾರತವನ್ನು ವಿರೋಧಿಸುವ ಶಕ್ತಿಗಳಿಗೆ ಹೊಸ ಜೀವ ನೀಡಿ ಹೊಸ ಶಕ್ತಿ ಕೊಟ್ಟಂತೆ ಕಾಣಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿಸೂರ್ಯ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಗಮನಿಸಿದರೆ, ಯಾರು ಭಾರತದ ವಿರೋಧಿಗಳಿದ್ದಾರೋ ಅವರ ಜೊತೆ ರಾಹುಲ್ ಗಾಂಧಿಯವರು ಸ್ನೇಹಿತರಾಗಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.
ಇಂಡಿಯಾಸ್ ಎನಿಮೀಸ್ ಆರ್ ರಾಹುಲ್ ಗಾಂಧಿಸ್ ಫ್ರೆಂಡ್ಸ್ ಎಂದ ಅವರು, ಇದು ರಾಹುಲ್ ಗಾಂಧಿಯವರ ವರ್ತನೆ, ಅವರು ವಿದೇಶದಲ್ಲಿ ಆಡಿದ ಮಾತುಗಳು, ಭೇಟಿ ಮಾಡಿದ ಜನರಿಂದ ಬಹಳ ಸ್ಪಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದರು.
ದೇಶದ ಒಳಗಡೆ ರಾಹುಲ್ ಗಾಂಧಿಯವರು, ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುತ್ತದೆ; ಜಾತಿ ಆಧಾರದ ಗಣತಿ ಮಾಡಿ, ಒಬಿಸಿ, ಎಸ್ಸಿ, ಎಸ್ಟಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಭಾಷಣ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಹೋದ ತಕ್ಷಣವೇ ಅಮೆರಿಕದಲ್ಲಿ ಇದ್ದ ತಕ್ಷಣ ಇಂಗ್ಲಿಷ್ನಲ್ಲಿ ಮಾತನಾಡುವುದರಿಂದ ಇಲ್ಲಿನವರು ಕೇಳಿಸಿಕೊಳ್ಳಲಾರರು ಅಂದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದಾಗ ಮೀಸಲಾತಿ ರದ್ದು ಮಾಡುವುದಾಗಿ ಭಾಷಣ ಮಾಡುತ್ತಾರೆ ಎಂದು ವಿವರಿಸಿದರು.