ನವದೆಹಲಿ, ಸೆ.13(DaijiworldNews/AA): ಆಗ್ರಾ ನಗರವನ್ನು 'ವಿಶ್ವ ಪರಂಪರೆಯ ತಾಣ' ಎಂದು ಘೋಷಣೆ ಮಾಡಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಯಾವುದೇ ಸ್ಥಳವನ್ನು ಪಾರಂಪರಿಕ ತಾಣವೆಂದು ಘೋಷಣೆ ಮಾಡಲು ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಆಗ್ರಾವನ್ನು ಯುನೆಸ್ಕೋಗೆ 'ವಿಶ್ವ ಪರಂಪರೆಯ ತಾಣ' ಸ್ಥಾನಮಾನಕ್ಕಾಗಿ ನಾಮನಿರ್ದೇಶನವನ್ನು ಮಾಡಬೇಕಾಗಿದೆ. ಇಂತಹ ಘೋಷಣೆಯು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ವಾದವನ್ನು ಆಲಿಸಿದ ಪೀಠ, ನ್ಯಾಯಾಲಯ ಇಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆಗ್ರಾವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸುವುದರಿಂದ ನಗರಕ್ಕೆ ಯಾವುದೇ ವಿಶೇಷ ಪ್ರಯೋಜನವಿದೆ ಎಂದು ತೋರಿಸಲು ಯಾವ ದಾಖಲೆಯನ್ನೂ ಇರಿಸಲಾಗಿಲ್ಲ ಎಂದು ತಿಳಿಸಿತು. ನಂತರ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು.