ಉತ್ತರ ಪ್ರದೇಶ, ಸೆ.15 (DaijiworldNews/AK):ಕಠಿಣ ಪರಿಶ್ರಮ ಮತ್ತು ಅಚಲವಾದ ಶ್ರದ್ಧೆಯು ಯಾವುದೇ ವಯಸ್ಸಿನಲ್ಲಿಯೂ ಅಸಾಧ್ಯವಾದುದನ್ನು ಸಾಧಿಸುವಂತೆ ಮಾಡುತ್ತದೆ. ಅದೇ ರೀತಿ ಯುಪಿಎಸ್ಸಿ ಪಾಸ್ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ವೈಷ್ಣವಿ ಪೌಲ್.
ಉತ್ತರ ಪ್ರದೇಶದ ಗೊಂಡಾ ಮೂಲದ 26 ವರ್ಷದ ವೈಷ್ಣವಿ ಪೌಲ್, ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ 2022 ರಲ್ಲಿ 62 ನೇ ರ್ಯಾಂಕ್ ಗಳಿಸಿದ್ದಾರೆ. ವೈಷ್ಣವಿ ಕೂಡ ತನ್ನ ನಾಲ್ಕನೇ ಪ್ರಯತ್ನದಲ್ಲಿ ಅತ್ಯುತ್ತಮ ರ್ಯಾಂಕ್ನೊಂದಿಗೆ ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಮನಾರ್ಹ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಮಾಡುತ್ತಿದ್ದ ಕೆಲಸಗಳನ್ನು ನೋಡಿ ಐಎಎಸ್ ಆಗಬೇಕೆಂದು ಕನಸು ಕಂಡಿದ್ದರು.ಐಎಎಸ್ ಅಧಿಕಾರಿಗಳಿಗೆ ಸಂಬಂಧಿಸಿದ ಅಧಿಕಾರ ಮತ್ತು ಜವಾಬ್ದಾರಿಗಳು ಅವರನ್ನು ಮತ್ತಷ್ಟು ಪ್ರೇರೇಪಿಸಿತು.
ವೈಷ್ಣವಿ ತನ್ನ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳುವ ಮೊದಲು ಗೊಂಡಾದ ಫಾತಿಮಾ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು, ಆದ್ರೆ ಮೇನ್ಸ್ನಲ್ಲಿ ಪಾಸ್ ಆಗಲಿಲ್ಲ. ಅದೇ ರೀತಿ ಮೂರನೇ ಪ್ರಯತ್ನದಲ್ಲಿ, ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡನ್ನೂ ಯಶಸ್ವಿಯಾಗಿ ಉತ್ತೀರ್ಣರಾದರು ಆದರೆ ಇಂಟರ್ವ್ಯೂನಲ್ಲಿ ಸಾಧ್ಯವಾಗಲಿಲ್ಲ.ಆದರೂ ಛಲಬಿಡದ ವೈಷ್ಣವಿ ತನ್ನ ಸತತ ಪರಿಶ್ರಮದೊಂದಿಗೆ 4ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸ್ ಮಾಡಿ ಐಎಎಸ್ ಅಧಿಕಾರಿಯಾದರು. ಇವರ ಸಾಧನೆ ಇಂದು ಹಲವು ಅಭ್ಯರ್ಥಿಗಳಿಗೆ ಸ್ಪೂರ್ತಿಯಾಗಿದೆ.