ಬೆಂಗಳೂರು, ಸೆ.15(DaijiworldNews/AA): ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಶ್ವಥ್ ನಾರಾಯಣ್, ರವಿಕುಮಾರ್, ಸಿ.ಟಿ ರವಿ ಸೇರಿದಂತೆ ಹಲವು ನಾಯಕರು ಸಂವಿಧಾನ ಪಾಲನೆಯಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಯಾರೇ ತಪ್ಪು ಮಾಡಿದ್ರು ಕ್ರಮ ಆಗಲೇಬೇಕು. ಆದರೆ ಈ ಸರ್ಕಾರದಲ್ಲಿ ಏನು ಕಾನೂನು ಪಾಲನೆ ಆಗಿದೆ? ಇವರು ಕಾನೂನಿಗೆ ಬೆಲೆ ಕೊಡ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಪಿಎಸ್ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿನ ಶಾಸಕ, ಶಾಸಕನ ಮಗನ ಬಂಧನ ಆಗಿದೆಯಾ? ವಿಜಯಪುರದಲ್ಲೂ ಕೃಷಿ ಸಚಿವರ ಮೇಲೆ ಆಪಾದನೆ ಮಾಡಿ ಆತ್ಮಹತ್ಯೆ ಆಗಿದೆ ಇದರ ಕ್ರಮ ಆಗಿದೆಯಾ? ಶಿವಮೊಗ್ಗದಲ್ಲಿ ಆತ್ಮಹತ್ಯೆ ಹತ್ಯೆ ಆಗಿದೆ, ಕ್ರಮ ಆಗಿದೆಯಾ? ಎಮದು ಸರ್ಕಾರವನ್ನು ಪ್ರಶ್ನಿಸಿದರು.
ಇನ್ನು ಎಂಎಲ್ಸಿ ರವಿಕುಮಾರ್ ಪ್ರತಿಕ್ರಿಯಿಸಿ, ಮುನಿರತ್ನ ಬಂಧನ ಪ್ರಕರಣದಲ್ಲಿ ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಚರ್ಚೆ ಮಾಡುತ್ತಾರೆ. ನೋಟಿಸ್ ಅಂತೂ ಬಿಜೆಪಿ ಜಾರಿ ಮಾಡಿದೆ. ಆಡಿಯೋ ಅವರದ್ದೇನಾ? ಕಟ್ ಅಂಡ್ ಪೇಸ್ಟ್ ಆಗಿದ್ಯಾ? ಅಥವಾ ಕಾಂಗ್ರೆಸ್ನವರೇ ಸೃಷ್ಟಿ ಮಾಡಿದ್ರಾ? ಅಂತಾ ಗೊತ್ತಾಗಬೇಕು. ಬಿಜೆಪಿ ಶಾಸಕರನ್ನು ಅರೆಸ್ಟ್ ಮಾಡ್ತೀರಿ, ಕಾಂಗ್ರೆಸ್ ಶಾಸಕರನ್ನು ಮೆರೆಯಲು ಬಿಡುತ್ತೀರಾ? ಮುನಿರತ್ನ ಬಂಧನ ವಿಚಾರಗಳಲ್ಲಿ ವಿಪಕ್ಷವನ್ನು ಸರ್ಕಾರ ಮಾತುಕತೆಗೆ ಕರೆಯಬೇಕು ಎಂದರು.