ಬೆಂಗಳೂರು, ಸೆ.17(DaijiworldNews/AK):ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಜೊತೆ ಮಾತನಾಡಿದ ಅವರು, ದೇಶ ಕಂಡ ಅಪರೂಪದ ನಾಯಕ, 3ನೇ ಬಾರಿ ಈ ದೇಶದ ಪ್ರಧಾನಿಯಾಗಿ ಸಮರ್ಥವಾಗಿ ಈ ದೇಶವನ್ನು ಯಾವುದೇ ಒಂದು ಭ್ರಷ್ಟಾಚಾರದ ಆಪಾದನೆ ಇಲ್ಲದೆ ಮುನ್ನಡೆಸಿ, ವಿಶ್ವನಾಯಕರಾಗಿರುವ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಸೇವಾ ಪಾಕ್ಷಿಕದ ಮೂಲಕ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಮೋದಿಯವರು ದೇಶದ ನಾಯಕತ್ವ ವಹಿಸಿಕೊಂಡ ಬಳಿಕ ವಿಶ್ವ ಮಟ್ಟದಲ್ಲಿ ಭಾರತವು ಶ್ರೇಷ್ಠ ದೇಶವಾಗಿ ಹೊರಹೊಮ್ಮಿದೆ. ಆರ್ಥಿಕತೆಯು ಬಲಿಷ್ಠಗೊಂಡಿದೆ. ರಷ್ಯಾ- ಉಕ್ರೇನ್ ಯುದ್ಧದ ಸಮಸ್ಯೆಯನ್ನು ನಮ್ಮ ದೇಶದ ಪ್ರಧಾನಮಂತ್ರಿಯವರು ಮಾತನಾಡಿ ಬಗೆಹರಿಸಬಹುದೆಂಬ ಮಟ್ಟಕ್ಕೆ ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು. ಮೋದಿಯವರ ನೇತೃತ್ವದಲ್ಲಿ ದೇಶದ ಸಾಧನೆಗಳನ್ನು ಅವರು ವಿವರಿಸಿದರು.