ಬೆಂಗಳೂರು, ಸೆ.17(DaijiworldNews/AK):ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರಕಾರವು ಕಳೆದ 100 ದಿನಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲನ್ನು ಇಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಯಕರ್ತರು ಮತ್ತು ಜನತೆಯ ಪರವಾಗಿ ಶುಭಾಶಯ ಕೋರಿದರು. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ- ಎನ್ಡಿಎ ಸರಕಾರವು ಮಹತ್ತರ ಸಾಧನೆ ಮಾಡಿದೆ ಎಂದು ನುಡಿದರು.
ಮಹಿಳಾ ಮತ್ತು ಯುವ ಸಬಲೀಕರಣ, ಆರೋಗ್ಯ ಸೇವೆ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಮೋದಿಜೀ ಅವರ ಸರಕಾರ ಒತ್ತು ನೀಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯದ ಎಲ್ಲ ಬಿಜೆಪಿ ಕಾರ್ಯಕರ್ತರ ಪರವಾಗಿ ಪ್ರಧಾನ ಸೇವಕರಿಗೆ ಭಗವಂತನು ಉತ್ತಮ ಆಯುಷ್ಯ, ಆರೋಗ್ಯವನ್ನು ಕೊಡಲಿ ಎಂದು ಅವರು ಪ್ರಾರ್ಥಿಸಿದರು. ಹಿಂದೆ ಕೇಂದ್ರದಲ್ಲಿ ಯುಪಿಎ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರ ಮಾಡುವುದೇ ಆಡಳಿತ ಎಂಬಂತಾಗಿತ್ತು ಎಂದು ಅವರು ಟೀಕಿಸಿದರು.
ಕಿಸಾನ್ ಸಮ್ಮಾನ್ ನಿಧಿ, ರಸ್ತೆ ಸಂಪರ್ಕ ಜಾಲದ ಅಭಿವೃದ್ಧಿ, ಬೆಂಗಳೂರು ಮೆಟ್ರೊ ಸಂಪರ್ಕ, ರೈಲು ಮಾರ್ಗಗಳ ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳಿಗೆ ಗರಿಷ್ಠ ಹಣವನ್ನು ಮೋದಿಯವರ ಸರಕಾರ ಕೊಟ್ಟಿದೆ ಎಂದು ಮೆಚ್ಚುಗೆ ಸೂಚಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯನ್ನು 70 ವರ್ಷಕ್ಕಿಂತ ಹೆಚ್ಚಿನ ಹಿರಿಯರಿಗೆ ವಿಸ್ತರಿಸಲಾಗುತ್ತಿದೆ. 6 ಕೋಟಿ ಹಿರಿಯರಿಗೆ ಈ ಯೋಜನೆ ಲಾಭ ತರಲಿದೆ ಎಂದು ವಿವರಿಸಿದರು.
ನ್ಯಾಯ ಸಂಹಿತಾ, ಭಾರತ ಸುರಕ್ಷಾ ಸಂಹಿತಾ ಮೊದಲಾದವುಗಳ ಜಾರಿ ಕುರಿತು ವಿವರಿಸಿದರು.
ಮೂರನೇ ಬಾರಿ ಪ್ರಧಾನಿಯಾಗಿರುವ ಮೋದಿಜೀ ಅವರು ದೇಶದ ಬಡವರು, ಎಲ್ಲ ಹಿಂದುಳಿದ ವರ್ಗಗಳು, ತುಳಿತಕ್ಕೆ ಒಳಗಾದವರು ಸೇರಿ ಎಲ್ಲರ ಹಿತಕ್ಕಾಗಿ, ಸರ್ವರ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷನ ನೆಲೆಯಲ್ಲಿ ಪಕ್ಷವನ್ನು ರಾಜ್ಯದಲ್ಲಿ ಸದೃಢವಾಗಿ ಕಟ್ಟುವುದು ಮತ್ತು ಕರ್ನಾಟಕವನ್ನು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲಾಗಿ ಮಾಡಲು ಶ್ರಮಿಸುತ್ತೇನೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.