ಬೆಂಗಳೂರು, ಸೆ.17(DaijiworldNews/AA): ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆಗೆ ಅನುಮತಿ ನೀಡಲು ಸಿದ್ಧ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಸೇರಿದ ಸಿದ್ದಸಿರಿ ಸಕ್ಕರೆ ಮತ್ತು ಡಿಸ್ಟಿಲರಿ ಕಾರ್ಖಾನೆ ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್ನಲ್ಲಿದೆ. ಈ ಹಂತದಲ್ಲಿ ರೈತರಿಂದ ಪ್ರತಿಭಟನೆ ನಡೆಸಿ, ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ. ಕಾರ್ಖಾನೆಗೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದರೆ ಸರ್ಕಾರ ಅನುಮತಿ ನೀಡಲು ಸಿದ್ದವಾಗಿದ್ದು, ಇದರಲ್ಲಿ ರಾಜಕೀಯ ದ್ವೇಷದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ಕಾನೂನು ಬಾಹಿರವಾಗಿ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯೇ 1.58 ಕೋಟಿ ದಂಡ ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಪ್ರಕರಣದಲ್ಲಿ ಉಚ್ಚನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.