ಕಲಬುರಗಿ, ಸೆ.17(DaijiworldNews/AA): ಕಲ್ಯಾಣ ಕರ್ನಾಟಕ ಭಾಗದ 46 ವಿಷಯಗಳಿಗೆ ಒಟ್ಟು 11,770 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬೀದರ್ ಮತ್ತು ರಾಯಚೂರು ಪಟ್ಟಣಗಳನ್ನು ನಗರಪಾಲಿಕೆಯಾಗಿ ಮಾಡುವ ಹಾಗೂ ಬೀದರ್ ಮತ್ತು ಕಲಬುರಗಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಯನ್ನು 7,200 ಕೋಟಿ ರೂಗಳ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗಕ್ಕೆ 56 ವಿಷಯಗಳನ್ನು ಚರ್ಚಿಸಲಾಗಿದೆ. ಇವುಗಳಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂಬಂಧಪಟ್ಟ ವಿಷಯಗಳಾಗಿತ್ತು. ಸಭೆಯಲ್ಲಿ ಮಂಡಿಸಲಾಗಿದ್ದ 56 ವಿಷಯಗಳ 12,692 ಕೋಟಿ ರೂ.ಗಳ ಯೋಜನೆಗಳ ಪ್ರಸ್ತಾವನೆ ಮಾಡಲಾಯಿತು. ನಾರಾಯಣಪುರ ಡ್ಯಾಂ ನಿಂದ ನೀರು ತರುವ ಯೋಜನೆ ಕೇಂದ್ರ ಸರ್ಕಾರದ ಪಾಲುದಾರಿಕೆ ಯೋಜನೆಯಿದಾಗಿದ್ದು, 7,200 ಕೋಟಿ ರೂ.ಗಳಲ್ಲಿ ಅರ್ಧ ಭಾಗದ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕಿದೆ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಭಾಗಕ್ಕೆ ಒಂದು ರೂಪಾಯಿ ಕೂಡ ನೀಡಿಲ್ಲ. ಸಂವಿಧಾನ ತಿದ್ದುಪಡಿಗೊಂಡು 371 ಜೆ ಬಂದ ನಂತರ ಈವರೆಗೆ ಅನುದಾನ ನೀಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವೂ ಕೂಡ ಈ ಭಾಗದ ಅಭಿವೃದ್ಧಿಗೆ 5,000 ಕೋಟಿ ರೂ. ನೀಡಲು ಕೇಂದ್ರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಮದು ತಿಳಿಸಿದರು.
ಇಂದು ಕಲ್ಯಾಣ ಕರ್ನಾಟಕದ ವಿಮೋಚನಾ ದಿನವಾದ್ದರಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು. 2013 ರಿಂದ 2018 ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ೨೦೧೪ ರಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಇಂದು ನಡೆಸಲಾಗಿದೆ. 2012 ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಧರಂಸಿAಗ್ ಅವರ ಹೋರಾಟದಿಂದ 371ಜೆ ಜಾರಿಗೆ ತರಲಾಯಿತು. ವಿಶೇಷ ಸವಲತ್ತುಗಳನ್ನು ಕಲ್ಯಾಣ ಕರ್ನಾಟಕದ ಭಾಗಕ್ಕೆ ನೀಡುವ ಉದ್ದೇಶದಿಂದ 2013 ರಲ್ಲಿ ಸಂವಿಧಾನ ತಿದ್ದುಪಡಿಯಾದ ನಂತರ ನಮ್ಮ ಸರ್ಕಾರದ ಅವಧಿಯಲ್ಲಿ ಈ ಕಾನೂನಿನ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಾಗೂ 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು, 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ 2 ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದಕ್ಕೆ 890 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಹೇಳಿದರು.