ಕೊಪ್ಪಳ, ಸೆ.17(DaijiworldNews/AA): ತುಂಗಭದ್ರಾ ಜಲಾಶಯಕ್ಕೆ ಸೆಪ್ಟಂಬರ್ 22 ರಂದು ಗಂಗೆ ಪೂಜೆ ನೆರವೇರಿಸಿ, ಬಾಗಿನ ಸಲ್ಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ದುರಸ್ತಿ ಮಾಡಿ ನೀರನ್ನ ಉಳಿಸಿದ್ದೇವೆ. ಕೊಚ್ಚಿಹೋಗಿದ್ದ ಕ್ರಸ್ಟ್ ಗೇಟ್ ದುರಸ್ತಿಗಾಗಿ 108 ಜನ ಶ್ರಮಿಸಿದ್ದಾರೆ. ಹೀಗಾಗಿ ಗಂಗಾ ಪೂಜೆಯೊಂದಿಗೆ 108 ಜನರಿಗೆ ಸನ್ಮಾನ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ದೇವರ ಅನುಗ್ರಹದಿಂದ ಗೇಟ್ ದುರಸ್ಥಿಯನ್ನು ಒಂದೇ ವಾರದಲ್ಲಿ ಮುಕ್ತಾಯವಾಯಿತು. ಇದರಿಂದ ಸಾಕಷ್ಟು ಪ್ರಮಾಣದ ನೀರನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಗೇಟ್ ದುರಸ್ಥಿ ಕಾರ್ಯದಲ್ಲಿ ಹಗಲಿರಳು ದುಡಿದಿರುವ 108 ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಸನ್ಮಾನಿಸಲಾಗುವುದು. ಜಲಾಶಯ ಬರ್ತಿಗೆ ಇನ್ನು ನಾಲ್ಕು ಟಿಎಂಸಿ ನೀರು ಬೇಕಾಗಿದ್ದು, ನೀರನ್ನು ನಿಲ್ಲಿಸಲು ತಿಳಿಸಿದ್ದೇನೆ ಎಂದರು.
ಆಗಸ್ಟ್ 13 ರಂದು ಅಂದುಕೊಂಡಂತೆ ಆಗಿದ್ದರೆ, ಸಿಎಂ ಸಿದ್ದರಾಮಯ್ಯನವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದರು. ಅದಕ್ಕಾಗಿ ಎಲ್ಲಾ ತಯಾರಿ ಕೂಡ ನಡೆದಿತ್ತು. ಆದರೆ ಆಗಸ್ಟ್ 10 ರಂದು ಜಲಾಶಯದ 19 ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಬಳಿಕ ಆಗಸ್ಟ್ 17 ರಂದು ಐದು ಎಲಿಮೆಂಟ್ಗಳನ್ನು ಯಶಸ್ವಿಯಾಗಿ ಅಳವಡಿಸಿ, ಜಲಾಶಯದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಂಡ ಯಶಸ್ವಿಯಾಗಿತ್ತು.