ನವದೆಹಲಿ, ಸೆ.18 (DaijiworldNews/ AK): ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದು ಅಸಂಭವ ಎಂದು ಕೇಂದ್ರ ಸಚಿವ ಸಂಪುಟದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಏಕಕಾಲಕ್ಕೆ ಚುನಾವಣಾ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ಚುನಾವಣೆಗೆ ಮುನ್ನ ಮಾಡಿರುವ ಚುನಾವಣ ಗಿಮಿಕ್. ಚುನಾವಣೆಗಳು ಬಂದಾಗ ಬಿಜೆಪಿ ಈ ಎಲ್ಲ ವಿಷಯಗಳನ್ನು ಹೇಳುತ್ತಾರೆ. ಇದನ್ನು ದೇಶದ ಜನ ಒಪ್ಪುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಇಂದು ಒಂದು ರಾಷ್ಟ್ರ ಒಂದು ಚುನಾವಣೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಮಾಜಿ ರಾಷ್ಟ್ರ ಪತಿ ರಾಮ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಿದ ನಂತ ಸಂಪುಟ ಒಪ್ಪಿಗೆ ನೀಡಿದೆ.