ಅಮರಾವತಿ, ಸೆ.19 (DaijiworldNews/ AK): ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಲಾಗುವ ಲಡ್ಡುಗಳಲ್ಲಿ ಹಿಂದಿನ ವೈಎಸ್ಆರ್ ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರಾಣಿಗಳ ಕೊಬ್ಬು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಸರ್ಕಾರ ಜನಸೇನಾ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು. ಬುಧವಾರ ನಡೆದ ಎನ್ ಡಿಎ ಪಕ್ಷದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು ಹಿಂದಿನ ಸರ್ಕಾರದ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ. ಆರೋಪ ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದ್ದಾರೆ.
ತಿರುಮಲ ದೇವಸ್ಥಾನದ ಪಾವಿತ್ರ್ಯತೆ ಮತ್ತು ಆಡಳಿತದ ಬಗ್ಗೆ ಈ ನಿಲುವು ಚರ್ಚೆಗೆ ಗ್ರಾಸವಾಗಿದೆ. ಕಳೆದ 5 ವರ್ಷಗಳಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಸಿಎಂ ನಾಯ್ಡು ಹೇಳಿದ್ದಾರೆ. ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಿದ್ದರು, ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ, ದೇವಾಲಯದ ಸಂಪ್ರದಾಯಗಳನ್ನು ಮರುಸ್ಥಾಪಿಸುವುದರ ಜೊತೆಗೆ, ದೇವಾಲಯವನ್ನು ಉಳಿಸಿಕೊಳ್ಳಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದರು.
ಈ ಆರೋಪವನ್ನು ಹಿರಿಯ ವೈಎಸ್ಆರ್ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಅವರು ನಾಯ್ಡು ಅವರ ಹೇಳಿಕೆಯನ್ನು ದೇವಾಲಯದ ಪವಿತ್ರತೆ ಮತ್ತು ಅಸಂಖ್ಯಾತ ಹಿಂದೂಗಳ ನಂಬಿಕೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ.ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.