ನವದೆಹಲಿ,ಸೆ.19 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸದಸ್ಯರನ್ನು ನಿಂದಿಸಿದ ಇತಿಹಾಸವನ್ನು ರಾಹುಲ್ ಗಾಂಧಿಯವರು ಹೊಂದಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಗುರುವಾರ ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸದಸ್ಯರು ಗಾಂಧಿ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಮೋದಿಗೆ ಬರೆದ ಪತ್ರದ ವಿಚಾರಕ್ಕೆ ನಡ್ಡಾ ತಿರುಗೇಟು ನೀಡಿದ್ದಾರೆ.
ಇತ್ತೀಚಿಗಿನ ಅಮೆರಿಕ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಕೆಲವು ಹೇಳಿಕೆಗಳ ವಿರುದ್ಧ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರತಿಕ್ರಿಯೆ ನೀಡಿದ್ದಾರೆ.
ಯಶಸ್ಸು ಸಾಧಿಸುವ ಉತ್ಸಾಹದಲ್ಲಿ ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಜೆಪಿ ನಡ್ಡಾ ಅವರು ತಮ್ಮ ಪತ್ರದಲ್ಲಿ ಪ್ರತಿಪಕ್ಷದ ನಾಯಕರು ಪ್ರಧಾನಿ ಮತ್ತು ಒಬಿಸಿ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಬರೆದಿದ್ದಾರೆ.