ವಿಜಯನಗರ, ಸೆ.18 (DaijiworldNews/ AK): ಅಭಿವೃದ್ಧಿ ವಿಚಾರವನ್ನು ಸಂಪೂರ್ಣ ಕಡೆಗಣಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ದಲಿತರನ್ನೂ ವಂಚಿಸಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ; ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣವಾಗಿ ಸೋತಿದೆ ಎಂದು ಟೀಕಿಸಿದರು.
ಕೇವಲ 5 ಗ್ಯಾರಂಟಿಗಳು ಎಂದು ಹೇಳಿಕೊಂಡು, ಅದನ್ನೂ ಸರಿಯಾಗಿ ಜನರಿಗೆ ತಲುಪಿಸದೆ ವಂಚನೆ ಮಾಡಿದೆ. ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಈಗಾಗಲೇ ಅವರು ಬೇರೆಬೇರೆ ಕಾರ್ಯಗಳಿಗೆ ಉಪಯೋಗ ಮಾಡಿದ್ದಾರೆ. ಈ ಮೂಲಕ ದಲಿತರನ್ನೂ ವಂಚನೆ ಮಾಡಿದ್ದಾರೆ. ಅವರಿಗೆ ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇದರ ವಿರುದ್ಧ ಯಶಸ್ವಿ ಹೋರಾಟ ಮಾಡಿದ್ದೇವೆ. ಪರಿಶಿಷ್ಟ ಜಾತಿ- ವರ್ಗಗಳ ಶ್ರೇಯೋಭಿವೃದ್ಧಿಗೆ ಇಟ್ಟಿರುವ ಹಣವನ್ನು ಬೇರೆ ವಿಚಾರಗಳಿಗೆ ಪೋಲು ಮಾಡಬಾರದೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಖಜಾನೆಯಲ್ಲಿ ಹಣ ಖಾಲಿ ಇರುವ ಕಾರಣ ದಾರಿ ತಪ್ಪಿಸಿ ಈ ಪರಿಶಿಷ್ಟ ಜಾತಿ- ವರ್ಗಗಳ ಹಣವನ್ನು ತೆಗೆದು ಬೇರೆಬೇರೆ ಕಾರ್ಯಗಳಿಗೆ ಉಪಯೋಗಿಸಿ ಅವರಿಗೆ ಅನ್ಯಾಯ ಮಾಡಲಾಗುತ್ತಿತ್ತು ಎಂದು ಟೀಕಿಸಿದರು.
ಕೊನೆಗೂ ಒಂದೂವರೆ ವರ್ಷದ ಬಳಿಕ 25 ಸಾವಿರ ಕೋಟಿ ಲೂಟಿ ಆದ ಬಳಿಕ ಮುಖ್ಯಮಂತ್ರಿಗಳಿಗೆ ನಿನ್ನೆ ಮನವರಿಕೆ ಆಗಿದೆ. ನಾವು ತಪ್ಪು ಮಾಡಿದ್ದೇವೆ. ಅವರ ಹಣವನ್ನು ನಾವು ಈ ರೀತಿ ಬಳಸಬಾರದಿತ್ತು ಎಂದು ನಿನ್ನೆ ಹೇಳಿದ್ದಾರೆ. ಕೊನೆಗೂ ಅವರಿಗೆ ತಪ್ಪಿನ ಅರಿವಾಗಿದೆ ಎಂದರು.