ಬೆಂಗಳೂರು, ಸೆ.19 (DaijiworldNews/TA):ಕಾಂಗ್ರೆಸ್ಸಿನಲ್ಲಿ ಸಿಎಂ ಆಗುವವರ ರೇಸ್ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ತುಮಕೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಬಿಜೆಪಿ ವತಿಯಿಂದ ದುಷ್ಟ ಕಾಂಗ್ರೆಸ್ ವಿರುದ್ಧ ಹೋರಾಟಗಳನ್ನು ಮಾಡುತ್ತಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಹೋರಾಟ, ಮುಡಾ ವಿಚಾರದಲ್ಲಿ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಸೇರಿ ನಮ್ಮ ಪಕ್ಷದ ನಿರಂತರ ಹೋರಾಟಗಳ ಫಲವಾಗಿ ಮುಖ್ಯಮಂತ್ರಿಗಳು ಒಂಟಿಗಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ವಿಶ್ಲೇಷಿಸಿದರು.
ಹತಾಶರಾದ ಮುಖ್ಯಮಂತ್ರಿಗಳು ವಿರೋಧ ಪಕ್ಷವನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಹಳೆಯ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವುದು ಹೊಸದೇನೂ ಅಲ್ಲ ಎಂದು ತಿಳಿಸಿದರು. ಆದರೆ, ರಾಜ್ಯದ ಜನರು ಇದೆಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ಸಿನದು ಅಭಿವೃದ್ಧಿಶೂನ್ಯ ಸರಕಾರ ಎಂದು ಜನರು ಮಾತನಾಡುತ್ತಿದ್ದಾರೆ. ‘ಅಹಿಂದ’ ಹೆಸರು ಹೇಳಿಕೊಂಡು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು, ಎಲ್ಲ ಸಮಾಜ, ಎಲ್ಲ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಇಂಥ ಭ್ರಷ್ಟ ಕಾಂಗ್ರೆಸ್ ಸರಕಾರದಿಂದ ರಾಜ್ಯವು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ, ಗ್ಯಾರಂಟಿ ಎಂದು ಆಡಳಿತ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದರು. ಲೋಕಸಭಾ ಚುನಾವಣೆ ಹತ್ತಿರ ಬಂದಾಗ ಗ್ಯಾರಂಟಿ ಕೊಟ್ಟಿದ್ದಾರೆ. ಆಮೇಲೆ ಗೃಹಲಕ್ಷ್ಮಿ ಸೇರಿ ಯಾವುದೂ ಬರುತ್ತಿಲ್ಲ. ಗ್ರಾಮೀಣ ಭಾಗದ ಜನರು ಅಭಿವೃದ್ಧಿ ಇಲ್ಲದೆ ಹಾಗೂ ಬಸ್ಸುಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ. ಹಿಂದೆ ಬರಗಾಲದಲ್ಲಿ ಮತ್ತು ಈಗ ನೆರೆ ಆದಾಗ ರಾಜ್ಯ ಸರಕಾರದ ನಡವಳಿಕೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಮುನಿರತ್ನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ. ನಾವು ಯಾರನ್ನೂ ಡಿಫೆಂಡ್ ಮಾಡುವ ಪ್ರಶ್ನೆ ಇಲ್ಲ. ಆದರೆ, ಸರಿಯಾದ ರೀತಿ ತನಿಖೆ ಆಗಬೇಕು. ರಾಜ್ಯ ಸರಕಾರದ ತರಾತುರಿಯನ್ನು ನೋಡಿದರೆ, ಇದರ ಹಿಂದಿನ ರಾಜಕೀಯ ಷಡ್ಯಂತ್ರವನ್ನೂ ನಾವು ಗಮನಿಸಬೇಕಾಗಿದೆ. ತನಿಖೆ ಆದ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು.