ಬೆಂಗಳೂರು, ಸೆ.20(DaijiworldNews/AA): ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲಾ ದೇಗುಲಗಳಲ್ಲಿ ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನೇ ಬಳಸುವಂತೆ ಮುಜುರಾಯಿ ಇಲಾಖೆ ಆದೇಶಿಸಿದೆ.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಡಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಉಪಯೋಗಿಸಬೇಕು. ದೇವಾಲಯಗಳಲ್ಲಿ ತಯಾರಿಸಲಾಗುವ ಪ್ರಸಾದಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ತಿರುಮಲ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಕೂಡ, ನಂದಿನಿ ತುಪ್ಪದ ಗುಣಮಟ್ಟವನ್ನು ಹೊಗಳಿದ್ದಾರೆ. ಕರ್ನಾಟಕದ ನಂದಿನಿ ತುಪ್ಪವನ್ನು ಲಡ್ಡು ತಯಾರಿಯಲ್ಲಿ ಬಳಸಲು ಮತ್ತೆ ನಿರ್ಧಾರ ಮಾಡಿರುವುದು ಉತ್ತಮ ಸಂಗತಿ ಎಂದು ತಿಳಿಸಿದ್ದಾರೆ.