ಕೋಲ್ಕತ್ತಾ, ಸೆ.20(DaijiworldNews/AA): ಜಾರ್ಖಂಡ್ನ ಜಲಾಶಯಗಳಿಂದ ದಾಮೋದರ್ ವ್ಯಾಲಿ ಕಾಪೆರ್ಪೋರೇಷನ್ 5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಇದರಿಂದ ದಕ್ಷಿಣ ಬಂಗಾಳದಲ್ಲಿ ಪ್ರವಾಹ ಉಂಟಾಗಿದೆ. ಪಶ್ಚಿಮ ಬಂಗಾಳದ ಪ್ರವಾಹವು 'ಮಾನವ ನಿರ್ಮಿತ' ವಿಪತ್ತು ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಪರಿಹಾರ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಅವರು, ಈ ಪತ್ರದಲ್ಲಿ ದಕ್ಷಿಣ ಬಂಗಾಳದ ಜಿಲ್ಲೆಗಳಾದ ಪುರ್ಬಾ ಬರ್ಧಮಾನ್, ಪಶ್ಚಿಮ್ ಬರ್ಧಮಾನ್, ಬಿರ್ಭುಮ್, ಬಂಕುರಾ, ಹೌರಾ, ಹೂಗ್ಲಿ, ಪುರ್ಬಾ ಮೇದಿನಿರ್ಪೋರ್ ಮತ್ತು ಪಶ್ಚಿಮ ಮೇದಿನಿರ್ಪೋರ್ ತೀವ್ರ ಪ್ರವಾಹಕ್ಕೆ ಗುರಿಯಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ದಾಮೋದರ್ ವ್ಯಾಲಿ ಕಾಪೆರ್ಪೋರೇಷನ್ ಒಡೆತನದ ಮೈಥಾನ್ ಮತ್ತು ಪಂಚೆಟ್ ಅಣೆಕಟ್ಟುಗಳಿಂದ ಸುಮಾರು 5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಯೋಜಿತವಲ್ಲದ ಮತ್ತು ಏಕಪಕ್ಷೀಯ ನಿರ್ಧಾರದಿಂದ ಬಂಗಾಳದಲ್ಲಿ ವಿನಾಶಕಾರಿ ಪ್ರವಾಹ ಉಂಟಾಗಿದೆ ಎಂದು ಆರೋಪ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಬರೆದ ಈ ಪತ್ರದಲ್ಲಿ ರಾಜ್ಯವು 2009ರ ಬಳಿಕ ಲೋವರ್ ದಾಮೋದರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಈಗ ಅತಿದೊಡ್ಡ ಪ್ರವಾಹವನ್ನು ಎದುರಿಸುತ್ತಿದೆ. 1,000 ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಪ್ರದೇಶವು ಹಾನಿಗೊಳಗಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಗಾಗಿದೆ. ಇದರಿಂದ ಲಕ್ಷಾಂತರ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು, ಬಂಗಾಳ ಸರ್ಕಾರದ ವೈಫಲ್ಯದಿಂದ ಬಂಗಾಳದ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಆದರೆ ಅವರು ತಮ್ಮ ಅಧಿಕಾರಿಗಳ ಮೇಲೆ ಕೋಪವನ್ನು ಹೊರಹಾಕುತ್ತಿಲ್ಲ. ಜಾರ್ಖಂಡ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.