ಮೈಸೂರು, ಸೆ.21(DaijiworldNews/AA): 'ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಣವನ್ನು ಜನರ ಅನುಕೂಲಕ್ಕಾಗಿ ಅಭಿವೃದ್ಧಿಗೆ ಬಳಸುವುದರಲ್ಲಿ ತಪ್ಪೇನಿದೆ ಹೇಳಿ?' ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವರುಣ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮುಡಾದಿಂದ ಕೈಗೆತ್ತಿಕೊಳ್ಳಲಾದ 387 ಕೋಟಿ ವೆಚ್ಚದ ಕಾಮಗಾರಿಗಳ ವಿವರ ನೀಡುವಂತೆ ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, 'ಮುಡಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಹಣ ಬಳಕೆಯಾಗಿದೆ. ಅದರಲ್ಲಿ ಯಾವ ತಪ್ಪುಗಳೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಮುಡಾದ ಹಣ ಇರುವುದೇ ಜನರ ಒಳತಿಗೆ ಬಳಸುವುದಕ್ಕೆ. ಎಲ್ಲದಕ್ಕೂ ಸುಮ್ಮನೆ ಆರೋಪ ಮಾಡುತ್ತಾ ಹೋದರೆ ಹೇಗೆ ಹೇಳಿ? ನಮ್ಮ ತಂದೆ ಸಿದ್ದರಾಮಯ್ಯ ಅವರ ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳೂ ಸುಳ್ಳು. ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ವಿರೋಧ ಪಕ್ಷಗಳ ಯಾರಿಗೂ ಯಾವ ವಿಚಾರಗಳೂ ಸಿಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರಷ್ಟೆ ಎಂದು ಕಿಡಿ ಕಾರಿದರು.
ಇಡೀ ವಿಶ್ವದಲ್ಲೇ, ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು. ಇಂತಹ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲಾಗದೆ ವಿನಾಕಾರಣ ಆರೋಪಿಸುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡಬೇಕು ಎಂದು ಕೇಳುತ್ತಲೇ ಇರುತ್ತಾರೆ. ಅವರೇಕೆ ರಾಜೀನಾಮೆ ನೀಡಬೇಕು? ಆರೋಪಗಳಿಗೆಲ್ಲಾ ರಾಜೀನಾಮೆ ಕೊಡುತ್ತಾ ಹೋದರೆ ಅದರಲ್ಲಿ ಅರ್ಥ ಇದೆಯಾ? ಎಂದು ಹೇಳಿದರು.