ಬೆಂಗಳೂರು, ಸೆ.21(DaijiworldNews/AA): ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ದೇಹವನ್ನು 30ಕ್ಕೂ ಅಧಿಕ ತುಂಡುಗಳನ್ನಾಗಿ ಫ್ರಿಡ್ಜ್ನಲ್ಲಿಟ್ಟ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹತ್ಯೆಯಾದ ಯುವತಿಯನ್ನು ಬಿಹಾರ ಮೂಲದ ಮಹಾಲಕ್ಷ್ಮಿ(29) ಎಂದು ಗುರುತಿಸಲಾಗಿದೆ.
ಮೃತ ಮಹಾಲಕ್ಷ್ಮಿ ಅವರು ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಪ್ರಕರಣ ಸಂಬಂಧ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿದ್ದು, ಹಂತಕ ತಪ್ಪಿಸಿಕೊಳ್ಳಲು ಸಮಯ ಸಿಗುತ್ತದೆ ಎಂಬ ಉದ್ದೇಶದಿಂದ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದೆರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅದೇ ಬಿಲ್ಡಿಂಗ್ನ ಅಕ್ಕಪಕ್ಕದವರು ಇಂದು ಸಂಬಂಧಿಕರಿಗೆ ತಿಳಿಸಿದ್ದಾರೆ. ಅದರಂತೆ ಕೊಲೆಯಾದ ಯುವತಿಯ ತಾಯಿ ಮತ್ತು ಅಕ್ಕ ಮನೆಯ ಬಾಗಿಲು ತೆಗೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಹಿಳೆ ಕೊಲೆ ಆರೋಪಿಗಾಗಿ ವೈಯಾಲಿಕಾವಲ್, ಶೇಷಾದ್ರಿಪುರಂ ಹಾಗೂ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದು, ಪೊಲೀಸರು 8 ತಂಡಗಳನ್ನು ರಚಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.