ಬೆಂಗಳೂರು, ಸೆ.22(DaijiworldNews/AK): ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಚಾರ ದೇಶದಲ್ಲಿ ಚರ್ಚೆಯ ಕೇಂದ್ರವಾಗಿದ್ದು, ಲಡ್ಡು ತಯಾರಿಕೆಯಲ್ಲಿ ಈ ಹಿಂದೆ ಬಳಸಿರುವ ತುಪ್ಪ ಕಲಬೆರಕೆಯಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತಯಾರಾಗುವ ವಿವಿಧ ಕಂಪನಿಯ ತುಪ್ಪವನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ. ಇಲ್ಲಿ ತಯಾರಾಗುವ ಮತ್ತು ಮಾರಾಟ ಮಾಡುತ್ತಿರುವ ವಿವಿಧ ಕಂಪನಿಯ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶಿಸಿದ್ದಾರೆ.
ತ್ವರಿತಗತಿಯಲ್ಲಿ ವಿವಿಧ ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಕೆ ಕಂಡು ಬಂದಲ್ಲಿ, ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.