ಬೆಂಗಳೂರು, ಸೆ.23(DaijiworldNews/AK): ಇಂದಿನ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಉಪ ಚುನಾವಣೆಗೆ ಸಂಬಂಧಿಸಿ ವಿಸ್ತಂತವಾಗಿ ಚರ್ಚೆ ನಡೆಸಿದ್ದೇವೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚನ್ನಪಟ್ಟಣ, ಸೊಂಡೂರು ಮತ್ತು ಶಿಗ್ಗಾಂವಿ ಉಪ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆ ಆಗಬಹುದು. 3 ಉಪ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲುವ ದೃಷ್ಟಿಯಿಂದ ವಿಶೇಷ ಪ್ರಯತ್ನ ಮಾಡಬೇಕು ಎಂಬ ಚರ್ಚೆ ನಡೆದಿದೆ ಎಂದರು.
ಅಭ್ಯರ್ಥಿ ಸಂಬಂಧಿಸಿ ಎನ್ಡಿಎ ಮಿತ್ರ ಪಕ್ಷವಾದ ಜೆಡಿಎಸ್ ಮತ್ತು ನಮ್ಮ ಕೇಂದ್ರೀಯ ನಾಯಕರ ಜೊತೆ ಸಮಾಲೋಚನೆ ಮಾಡಿ, ನಿರ್ಣಯಿಸಲು ಕೋರ್ ಕಮಿಟಿ ನಿರ್ಧರಿಸಿದೆ. ಈ ಹಿಂದೆ ಶ್ರೀನಿವಾಸ ಪೂಜಾರಿಯವರು ಚುನಾಯಿತರಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ಆ ಉಪ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೋಗಿ ಅಪೇಕ್ಷಿತರ ವರದಿ, 2 ಜಿಲ್ಲೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಬಂದಿದ್ದರು. ಇಲ್ಲಿ ಚರ್ಚಿಸಿದ್ದು, ಕೇಂದ್ರೀಯ ನಾಯಕತ್ವದ ಜೊತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ ಎಂದರು.ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಚರ್ಚಿಸಲಾಗಿದೆ ಎಂದರು.
ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು:
ನಮ್ಮ ಶಾಸಕ ಮುನಿರತ್ನ ಅವರ ಮೇಲೆ ಎಸ್ಐಟಿ ರಚನೆ ಮಾಡಿದ್ದಾರೆ. ಇಂಥದ್ದೇ ಆಪಾದನೆಗಳು ಕಾಂಗ್ರೆಸ್ ಶಾಸಕರ ಮೇಲೆ ಬಂದಾಗ ಅವರಿಗೆ ಒಂದು ನೀತಿ, ಬಿಜೆಪಿ ಶಾಸಕರಿಗೆ ಮತ್ತೊಂದು ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸರಕಾರ ಪೂರ್ವಗ್ರಹ ಪೀಡಿತವಾಗಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸತ್ಯಾಸತ್ಯತೆ ತನಿಖೆ ನಡೆಸುವುದು ಬೇರೆ. ಪೂರ್ವಗ್ರಹ, ರಾಜಕೀಯ ದ್ವೇಷದಿಂದ ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ನಡೆಸುವ ಸಂಚು ಬೇರೆ. ಈ ಸರಕಾರವು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸುವುದು ವ್ಯಕ್ತವಾಗಿದೆ ಎಂದು ತಿಳಿಸಿದರು.
ಅರ್ಧಸತ್ಯವನ್ನಷ್ಟೇ ಹೇಳಿದ ಸಿಎಂ
ಮುಖ್ಯಮಂತ್ರಿಗಳು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ರೀಡೂ ನಾನು ಮಾಡಿದ್ದೇನ್ರಿ. ಅದು ಸುಪ್ರೀಂ ಕೋರ್ಟ್ ಆದೇಶ’ ಎಂದಿದ್ದಾರೆ. ಇವರು (ಮುಖ್ಯಮಂತ್ರಿಗಳು) ಅರ್ಧಸತ್ಯವನ್ನಷ್ಟೇ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದೀರಿ. ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆಯೇ ಅದರ ತನಿಖೆಗೆ ಕೆಂಪಣ್ಣ ಆಯೋಗವನ್ನು ನೀವು ರಚಿಸಿದ್ದಿರಿ. ಬಂಡು ರಾಮಸ್ವಾಮಿ ಪ್ರಕರಣದಲ್ಲಿ 2010ರಲ್ಲಿ ತೀರ್ಪು ಕೊಡಲಾಗಿತ್ತು. 4 ವರ್ಷ ವರದಿಯನ್ನೂ ಕೊಡದೆ, ಈಗ ನೀವು ಬೇಕಾಬಿಟ್ಟಿ 880 ಎಕರೆಗೂ ಹೆಚ್ಚು ಡಿನೋಟಿಫಿಕೇಶನ್ ಮಾಡಿದ್ದೀರಿ ಎಂದು ಸಿ.ಟಿ.ರವಿ ಅವರು ಆಕ್ಷೇಪಿಸಿದರು.