ಒಡಿಶಾ, ಸೆ.24(DaijiworldNews/AA): ದೇಶದ ಅತ್ಯಂತ ಕಠಿಣ ಪರಿಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಹೀಗೆ ಉತ್ತೀರ್ಣರಾದವರಲ್ಲಿ ಅನನ್ಯಾ ದಾಸ್ ಕೂಡ ಒಬ್ಬರು. ಅವರು ತಮ್ಮ ಮೊದಲ ಪ್ರಯತ್ನದಲ್ಲೇ 16ನೇ ರ್ಯಾಂಕ್ ನೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅನನ್ಯಾ ದಾಸ್ ಅವರು ಮೂಲತಃ ಒಡಿಶಾದವರು. ಆಕೆಯ ತಂದೆ ಬ್ಯಾಂಕ್ ಉದ್ಯೋಗಿದ್ದು, ಮಗಳನ್ನು ಬಹಳ ಶಿಸ್ತಿನಿಂದ ಬೆಳೆಸಿದರು. ಅನನ್ಯಾ ಅವರು ಚಿಕ್ಕ ವಯಸ್ಸಿನಿಂದಲೂ ಶೈಕ್ಷಣಿಕವಾಗಿ ಮುಂದಿದ್ದರು. ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪೂರ್ಣಗೊಳಿಸಿದ ಅವರು, ಬಳಿಕ ಬಿಟ್ಸ್ ಪಿಲಾನಿಯಿಂದ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು.
ಅನನ್ಯಾ ಆರಂಭದಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಜೈಪುರದ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಇಂಟರ್ನ್ ಆಗಿದ್ದರು. ಆದರೆ ಈ ಮಧ್ಯೆ ಯುಪಿಎಸ್ಸಿ ಪರೀಕ್ಷೆ ಬರೆದು ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಅವರು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಯುಪಿಎಸ್ಸಿ ಬರೆಯಲು ನಿರ್ಧರಿಸಿದ ಅವರು 2015 ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಾರೆ. ತನ್ನ ಮೊದಲ ಪ್ರಯತ್ನದಲ್ಲೇ ಅವರು 16ನೇ ರ್ಯಾಂಕ್ನೊಂದಿಗೆ ಉತ್ತೀರ್ಣರಾಗುತ್ತಾರೆ. ಈ ರ್ಯಾಂಕ್ ನೊಂದಿಗೆ ಅನನ್ಯಾ ಅವರು ಒಡಿಶಾದಿಂದ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದರು. ಗುಜರಾತ್ ಕೇಡರ್ಗೆ ಸೇರಿದರು ಮತ್ತು ಕಟಕ್ ಮುನ್ಸಿಪಲ್ ಕಾರ್ಪೊರೇಶನ್ನ ಕಮಿಷನರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು.
ಇತ್ತೀಚೆಗೆ, ಅನನ್ಯ ದಾಸ್ ಅವರನ್ನು ಬರ್ಗಢಕ್ಕೆ ವರ್ಗಾಯಿಸಲಾಯಿತು, ಅಲ್ಲಿ ಅವರು ಈಗ ಕೈಮಗ್ಗ, ಜವಳಿ ಮತ್ತು ಕರಕುಶಲ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.