ಹೈದರಾಬಾದ್, ಸೆ.24(DaijiworldNews/AA): ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರವು ಎಸ್ಐಟಿ ರಚನೆ ಮಾಡಿದೆ.
ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಸೆ. 22ರಂದು ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾದ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿನ ಕಲಬೆರಕೆ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದು ಎಸ್ಐಟಿ ರಚಿಸಲಾಗಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಗುಂಟೂರು ರೇಂಜ್ ಇನ್ಸ್ಪೆಕ್ಟರ್ ಜನರಲ್ ಸರ್ವಶ್ರೇಷ್ಠ ತ್ರಿಪಾಠಿ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರನ್ನಾಗಿ ನೇಮಿಸಿದೆ. ವಿಶಾಖ ವ್ಯಾಪ್ತಿಯ ಡಿಐಜಿ ಗೋಪಿನಾಥ್, ಕಡಪ ಎಸ್ಪಿ ಹರ್ಷವರ್ಧನ್ ಅವರಲ್ಲದೆ, ಡಿಎಸ್ಪಿಗಳು ಮತ್ತು ಇನ್ಸ್ಪೆಕ್ಟರ್ಗಳು ಸೇರಿದಂತೆ ಇತರ ಸಿಬ್ಬಂದಿಯನ್ನು ಎಸ್ಐಟಿ ಒಳಗೊಂಡಿದೆ. ಈ ತಂಡವು ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕಲಬೆರಕೆ ತುಪ್ಪವನ್ನು ಖರೀದಿಸುವುದು ಮತ್ತು ಹಿಂದಿನ ಆಡಳಿತದಿಂದ ಅಧಿಕಾರದ ದುರುಪಯೋಗ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ತನಿಖೆ ನಡೆಸಲಿದೆ.