ಬೆಳಗಾವಿ, ಸೆ.28(DaijiworldNews/AA): ಭೌಗೋಳಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆಯಾಗದ ಹೊರತು, ಅಭಿವೃದ್ಧಿ ಸಾಧ್ಯವಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ದಸರಾ ಹಬ್ಬ ಮುಗಿದ ಬಳಿಕ ಸಿಎಂ ಹಾಗೂ ಕಂದಾಯ ಸಚಿವರಿಗೆ ಮನವಿ ಪತ್ರ ನೀಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾವುದನ್ನು ಹೊಸ ಜಿಲ್ಲೆ ಮಾಡಬೇಕೆಂದು ನಾನು ಹೇಳುವುದಿಲ್ಲ. ಆದರೆ, ಬೆಳಗಾವಿಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜಿಸಬಹುದು. ಪಂಚಮಸಾಲಿ ಮೀಸಲಾತಿ ಕುರಿತು ಚರ್ಚಿಸಲು ಸಿದ್ದರಾಮಯ್ಯ ಸಮಯ ಕೊಡುತ್ತಿಲ್ಲ. ನಮ್ಮ ಸಮುದಾಯದ ಶಾಸಕರೂ ಧ್ವನಿ ಎತ್ತುತ್ತಿಲ್ಲ ಎಂಬ ಕೂಡಲಸಂಗಮ ಪೀಠದ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಶ್ರೀಗಳಿಗೆ ಹಿಂದೆಯೇ ಸಮಯ ಕೊಡಿಸಿದ್ದೇವೆ. ಸುವರ್ಣ ವಿಧಾನಸೌಧದಲ್ಲೂ ಭೇಟಿಗೆ ಅವಕಾಶ ಕೊಡಿಸಿದ್ದೆವು. ಶ್ರೀಗಳು ಏಕೆ ಹೀಗೆ ಹೇಳಿದರೋ ಗೊತ್ತಿಲ್ಲ ಎಂದು ಹೇಳಿದರು.
ಸ್ವಾಭಿಮಾನಿ ಪಂಚಮಸಾಲಿ ಸಮುದಾಯಕ್ಕೆ ಮುರುಗೇಶ ನಿರಾಣಿ ಏನು ಒಳ್ಳೆಯದ್ದನ್ನು ಮಾಡಿದ್ದಾರೆ ಹೇಳಲಿ. ಆಮೇಲೆ ನನಗೆ ಬಂಗಾರ ಕೊಡಿಸುವ ಬಗ್ಗೆ ತಿಳಿಸಲಿ. ತಮ್ಮ ಅಧಿಕಾರ ಅವಧಿಯಲ್ಲಿ ನಿರಾಣಿ ಈ ಸಮುದಾಯಕ್ಕೆ ಏನೂ ಮಾಡಲಿಲ್ಲ. ಆದರೆ, ನಾನು ಮೀಸಲಾತಿ ಹೋರಾಟದ ಪರವಾಗಿ ಇದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.