ಮೈಸೂರು, ಸೆ.28(DaijiworldNews/AA): ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಜೊತೆ ಕಾನೂನು ಸಲಹೆಗಾರ ಪೊನ್ನಣ್ಣ, ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚೆ ನಡೆಯಿತು. ಈ ಚರ್ಚೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟದ ವಿಚಾರವನ್ನ ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ. ಕಾನೂನು ಸಲಹೆಗಾರ ಪೊನಣ್ಣ ನನ್ನನ್ನು ಭೇಟಿಯಾಗಿದ್ದಾರೆ ಅಷ್ಟೇ. ನಾನು ಅವರ ಬಳಿ ಯಾವ ಚರ್ಚೆಗಳನ್ನು ಮಾಡಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಹೋಗುತ್ತಿದ್ದರು. ಹೀಗಾಗಿ ಸೌಜನ್ಯವಾಗಿ ಬಂದಿದ್ದಾರೆ. ಇವತ್ತು ಮಾಧ್ಯಮಗಳಿಗೆ ಹೇಳುವುದಕ್ಕೆ ನನ್ನ ಬಳಿ ಏನು ಇಲ್ಲ. ನೀವೇ ಏನಾದರೂ ಇದ್ದರೆ ಹೇಳಿ ಎಂದರು.
ಇದೇ ವೇಳೆ ಕುಮಾರಸ್ವಾಮಿ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಯ ಈ ಆರೋಪಗಳಿಗೆ ನಾನು ಉತ್ತರ ನೀಡುವುದಿಲ್ಲ. ಉತ್ತರ ಕೊಡಬೇಕು ಅಂತ ಎಲ್ಲಿಯೂ ಇಲ್ಲ. ಉತ್ತರ ಕೊಡಲ್ಲ ಎಂದ ಮೇಲೆ ನಾನು ಕೊಡುವುದಿಲ್ಲ. ಮತ್ತೆ ಮತ್ತೆ ಅದನ್ನೇ ನನ್ನ ಬಳಿ ಪ್ರಶ್ನಿಸಬೇಡಿ ಎಂದು ಹೇಳಿದರು.