ಬೆಂಗಳೂರು, ಸೆ.28(DaijiworldNews/AA): ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಹಲವು ತಿಂಗಳಿಂದ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಅನೇಕ ಹಗರಣಗಳು ಹೊರ ಬಂದಿದ್ದು, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಭಾಗಿಯಾಗಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಸಿರಂ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಭಾಗಿಯಾಗಿಲ್ಲದೆ ಇದ್ದರೆ, ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅವರನ್ನು ರಕ್ಷಿಸಲು ಅನುಕೂಲವಾಗುವ ನಿರ್ಧಾರಗಳನ್ನು ಏಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಆಡಳಿತ ಪಕ್ಷದವರು ನಡೆಸಿದ್ದ ಹಗರಣಗಳನ್ನು ಉಲ್ಲೇಖಿಸಿ ಸಿಎಂ, ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ, ಪ್ರಸ್ತುತ ತಮ್ಮ ವಿರುದ್ಧವೇ ಆರೋಪ ಕೇಳಿಬಂದಿದ್ದರೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ ಎಂದು ತಿಳಿಸಿದ್ದಾರೆ.