ಕೇರಳ, ಸೆ.29(DaijiworldNews/AA): ಪ್ರತಿ ವರ್ಷವೂ ಸಾವಿರಾರು ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಐಎಎಸ್ ಅಧಿಕಾರಿಯಾಗುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡ ರೇಣು ರಾಜ್ ಅವರ ಯಶೋಗಾಥೆ ಇದು.
ಕೇರಳದ ಕೊಟ್ಟಾಯಂನಲ್ಲಿ ಬೆಳೆದ ರೇಣು ಅವರ ತಂದೆ ಸರ್ಕಾರಿ ಉದ್ಯೋಗಿ. ಚಂಗನಾಸ್ಸೆರಿಯ ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಆ ಬಳಿಕ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದಿದ ಅವರು, ವೈದ್ಯಕೀಯ ಪದವಿಯನ್ನು ಗಳಿಸುತ್ತಾರೆ.
ಸರ್ಜನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣು ಅವರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ. ಆ ಬಳಿಕ 2014ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ರೇಣು ಅವರು ತಮ್ಮ ಮೊದಲ ಪ್ರಯತ್ನದಲ್ಲೇ 2ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ.
ಐಎಎಸ್ ಅಧಿಕಾರಿಯಾಗುವುದು ರೇಣುವಿಗೆ ಬಾಲ್ಯದ ಕನಸಾಗಿತ್ತು. ಪ್ರಸ್ತುತ ರೇಣು ಅವರು ವಯನಾಡಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಹಲವಾರು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.