ಮೈಸೂರು, ಸೆ.29(DaijiworldNews/AA): ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ತಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿ ಇಂದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಅಹವಾಲು ಆಲಿಸಿರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಡಾ ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಅಪರಾಧ ಅಥವಾ ಇನ್ನಿತರ ಪ್ರಕರಣಗಳಿಗೆ ಕಾನೂನು ಪ್ರಕ್ರಿಯೆ ಎಂಬುವುದು ಇರುತ್ತದೆ. ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮುಂದುವರೆದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಕೇವಲ 3 ದಿನಗಳು ಬಾಕಿ ಇದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 2 ರಂದು ಮೈಸೂರಿಗೆ ಆಗಮಿಸಿ ದಸರಾ ಮಹೋತ್ಸವದ ಸಕಲ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.