ನವದೆಹಲಿ, ಸೆ.30(DaijiworldNews/AA): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿ ಸೋಮವಾರ ಆದೇಶಿಸಿದೆ. ಇದರೊಂದಿಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ಸಿಕ್ಕಂತಾಗಿದೆ.
ಈ ಹಿಂದೆ ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಜನಾರ್ದನ ರೆಡ್ಡಿ ಅವರು ಪೂರ್ವಾನುವತಿ ಪಡೆಯುವುದು ಕಡ್ಡಾಯವಾಗಿತ್ತು. ಅವರಿಗೆ ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ಷರತ್ತು ವಿಧಿಸಿತ್ತು. ಇದೀಗ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠವು ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಹೊಸ ಆದೇಶ ಹೊರಡಿಸಿದೆ.
ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಬಳಿಕ ಈ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 2015 ರ ಜನವರಿ 23 ರಂದು ಸುಪ್ರಿಂ ಕೋರ್ಟ್ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ, ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಅವರು ಪೂರ್ವಾನುಮತಿ ಪಡೆಯಬೇಕೆಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು.