ಬೆಂಗಳೂರು, ಸೆ.30(DaijiworldNews/AK): ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು 1,200 ಕೋಟಿ ರೂಪಾಯಿ ರೆಡಿ ಮಾಡಿ ಇಟ್ಟುಕೊಳ್ಳಲಾಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ನಮಗೂ ಮಾಹಿತಿ ಇದೆ ಎಂದರು. ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಮಾಹಿತಿಯನ್ನು ತಿಳಿಸಿದ್ದೇನೆ. ಇದು ತೆರಿಗೆ ಇಲಾಖೆ ಹಾಗೂ ಇಡಿ ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ ಮಾಡಲಿದ್ದೇನೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಷಡ್ಯಂತ್ರ ನಡೆಸಲಾಗಿದೆ. ಅದಕ್ಕಾಗಿ 1,200 ಕೋಟಿ ರೂ. ರೆಡಿ ಮಾಡಿ ಇಡಲಾಗಿದೆ. ಈ ಷಡ್ಯಂತ್ರದ ಭಾಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ಇದ್ದಾರೆ. ಬಿಜೆಪಿ ಹೈಕಮಾಂಡ್ಗೆ ಆಸಕ್ತಿಯಿಲ್ಲದಿದ್ದರೂ ಬಿಜೆಪಿಯೊಳಗಿನ ಕೆಲವು ಮಂದಿ ಆಪರೇಷನ್ ಕಮಲದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಸಂಚಿನ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ನಾವು ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದಿದ್ದರು.