ಬೆಂಗಳೂರು, ಸೆ.30(DaijiworldNews/AK):ಸರಕಾರವನ್ನು ರಚಿಸುವುದು ಹಣದ ಆಧಾರದಲ್ಲಿ ಎಂಬ ನಂಬಿಕೆ ನಮ್ಮದಲ್ಲ. ಇಲ್ಲಿನ ತನಕ ನಾವು ಸರಕಾರ ರಚಿಸಿದ್ದು ಶಾಸಕರ ಬೆಂಬಲದಿಂದಲೇ ವಿನಾ ಯಾವುದೇ ಹಣಕಾಸಿನ ಬೆಂಬಲದೊಂದಿಗೆ ಸರಕಾರ ರಚಿಸಿಲ್ಲ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸಿಎಂ ಆಗಲು 1,200 ಕೋಟಿ ಇಟ್ಟುಕೊಂಡಿದ್ದಾರೆ. ಸರಕಾರ ಉರುಳಿಸಲು ಪ್ರಯತ್ನ ನಡೆದಿದೆ ಎಂಬ ಬಿಜೆಪಿ ಪ್ರಮುಖ ನಾಯಕರು ಆರೋಪಿಸಿದ್ದಾರೆ’ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರ ನೀಡಿದರು. ಇದನ್ನು ಯಾವುದೇ ಕಾರಣಕ್ಕೂ ಪಕ್ಷ ಒಪ್ಪಲು ತಯಾರಿಲ್ಲ. ಎಂದು ಸ್ಪಷ್ಟಪಡಿಸಿದರು.
ಆ ರೀತಿಯ ಹೇಳಿಕೆಯು ಅವರ ವೈಯಕ್ತಿಕವಾದುದು. ಇದನ್ನು ಬಿಜೆಪಿ ಒಪ್ಪಲಸಾಧ್ಯ ಎಂದು ತಿಳಿಸಿದರು.
ಇದನ್ನು ಪಕ್ಷದ ವರಿಷ್ಠರು ಖಂಡಿತವಾಗಿ ಗಮನಿಸುತ್ತಾರೆ ಎಂದರಲ್ಲದೆ, ಯಾವ ಹಿನ್ನೆಲೆಯಲ್ಲಿ ಇದನ್ನು ಹೇಳಿದ್ದಾರೆ ಎಂಬ ವರದಿ ತರಿಸಿಕೊಂಡು ಮುಂದಿನ ದಿನಗಳಲ್ಲಿ ನಾವು ಅದಕ್ಕೆ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಪದೇಪದೇ ಇಂಥ ಹೇಳಿಕೆ ಕೊಡುವ ಅದೇ ನಾಯಕರ ವಿರುದ್ಧ ಕ್ರಮ ಯಾವಾಗ ಎಂದು ಕೇಳಿದಾಗ, ಪದೇಪದೇ ಈ ರೀತಿ ಮಾಡುವುದು ಸರಿಯಲ್ಲ ಎಂಬ ಚಿಂತನೆ ಕಾರ್ಯಕರ್ತರು ಮತ್ತು ಪಕ್ಷದ ವಲಯದಲ್ಲಿದೆ. ಇವತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಉಳಿದ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ಚಟುವಟಿಕೆಗಳು ಪಕ್ಷಕ್ಕೆ ಮುಜುಗರ ತರುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ನಮ್ಮದು ಎಂದು ತಿಳಿಸಿದರು
ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ನಾಯಕತ್ವ..
ಇಷ್ಟು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುತ್ತಿರಬೇಕಾದರೆ, ಎಲ್ಲ ಪಕ್ಷನಿಷ್ಠರೂ ಈ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಕ್ಟೋಬರ್ 15ರವರೆಗೆ ಇದೇ ಕಾರ್ಯಕ್ರಮ. ಬೇರೆ ಯಾವುದೇ ಕಾರ್ಯಕ್ರಮವನ್ನು ಯಾರಿಗೂ ಕೊಟ್ಟಿಲ್ಲ. ಇನ್ಯಾವುದೋ ಸಭೆಗಳನ್ನು ಮಾಡಬಾರದೆಂದು ಕೂಡ ನಾವು ಸ್ಪಷ್ಟ ಮಾಡಿದ್ದೇವೆ. ಎಲ್ಲ ಸಭೆಗಳೂ ಪಕ್ಷದ ಸದಸ್ಯತ್ವ ಹಿನ್ನೆಲೆಯಲ್ಲಿ ನಡೆಯಬೇಕೇ ವಿನಾ ಬೇರೆ ಯಾವ ಹಿನ್ನೆಲೆಯಲ್ಲೂ ನಡೆಯಬಾರದು ಎಂದು ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಅದು ವೈಯಕ್ತಿಕವೇ ವಿನಾ ಪಕ್ಷಕ್ಕೆ ಒಳಿತಾಗುವಂಥದ್ದು ಖಂಡಿತ ಅಲ್ಲ. ಇದರ ವಿರುದ್ಧ ಯಾರೋ ಚಟುವಟಿಕೆ ಮಾಡಿದರೆ, ಪಕ್ಷದ ಹೈಕಮಾಂಡ್ ಅದನ್ನು ಖಂಡಿತ ಗಮನಿಸಲಿದೆ. ಕಳೆದ 2-3 ದಿನಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕೇಂದ್ರ ನಾಯಕತ್ವ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದರು.
ಈ ಸಂಬಂಧ ಕೇಂದ್ರದ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಇದೆಲ್ಲವನ್ನೂ ತಿಳಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.