ಪಾಟ್ನಾ, ಅ.02(DaijiworldNews/TA):ಪ್ರವಾಹ ಪೀಡಿತ ಬಿಹಾರದಲ್ಲಿ ಪರಿಹಾರ ಸಾಮಗ್ರಿಗಳನ್ನು ಏರ್ ಡ್ರಾಪ್ ಮಾಡುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಹೆಲಿಕಾಪ್ಟರ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಐಎಎಫ್ ಸಿಬ್ಬಂದಿಗಳಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ.
ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆ ಹೆಲಿಕಾಪ್ಟರ್ನ ಒಂದು ಭಾಗ ಪ್ರವಾಹದಲ್ಲಿ ಮುಳುಗಿದೆ. ಹೆಲಿಕಾಪ್ಟರ್ ಮುಜಾಫರ್ಪುರದ ಔರಾಯ್ ವಿಭಾಗದ ನಯಾ ಗಾಂವ್ನಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಅದು ಸೀತಾಮರ್ಹಿಯಿಂದ ಹೊರಟಿತ್ತು ಎಂದು ಐಎಎಫ್ ಸಿಬ್ಬಂದಿ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಮಾತನಾಡಿ, ಪೈಲಟ್ನ ಚಾಣಾಕ್ಷತನದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಂಜಿನ್ ವಿಫಲವಾದ ಬಳಿಕ ಪೈಲಟ್ ಹೆಲಿಕಾಪ್ಟರ್ನ್ನು ಪ್ರವಾಹದ ನೀರಿನಲ್ಲಿ ಇಳಿಸಲಾಗಿದೆ. ಹೆಲಿಕಾಪ್ಟರ್ನಲ್ಲಿದ್ದ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂಬುವುದಾಗಿ ತಿಳಿಸಿದ್ದಾರೆ.