ಮೈಸೂರು,ಅ. 03(DaijiworldNews/TA):ಸರ್ಕಾರ ಉರುಳಿಸುವ ದುರಾಲೋಚನೆ ಬರದಂತೆ ತಡೆದು ಚುನಾಯಿತ ಸರ್ಕಾರಗಳು ಉಳಿಯುವ ಚಿಂತನೆ ಮೂಡಲಿ ಎಂದು ಸಾಹಿತಿ ಡಾ.ಹಂಪ ನಾಗರಾಜಯ್ಯ ಸಿಎಂಗೆ ಧೈರ್ಯ ತುಂಬಿದರು.
ಇಂದು ಬೆಳಗ್ಗೆ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು. ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತವಾಗಿದೆ. ಇದು ಅರಮನೆ ಹಬ್ಬವಲ್ಲ. ಜನರ ಆರಿಸಿದ ಸರ್ಕಾರ ನಡೆಸುವ ಜನರ ಹಬ್ಬವೆಂದರೆ ಅದು ದಸರಾ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಎಷ್ಟೆ ಅಡ್ಡಿ ಆತಂಕ ಎದುರಾಗುತ್ತಿದ್ದರೂ ಎದೆಗುಂದದೆ ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಪ್ರತಿಕೂಲ ಪ್ರವಾಹವನ್ನು ಎದುರಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಚಾಮುಂಡಿ ತಾಯಿಗೆ ಪಾರ್ಥನೆ ಸಲ್ಲಿಸಿ ಮಾತನಾಡಿದರು.
ಕೆಡವುದು ಸುಲಭ, ಕಟ್ಟುವುದು ಕಷ್ಟ. ಮತ್ತೆ ಮತ್ತೆ ಚುನಾವಣೆ ಬರುವುದು ಬೇಡ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯವಾದುದು. ಸೋತ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಐದು ವರ್ಷಗಳಲ್ಲಿ ಸಜ್ಜಾಗಬಹುದು. ದೋಷಾರೋಪಣೆ, ಅವಾಚ್ಯ ಶಬ್ಧ ಬಳಕೆಯೇ ಯುವಕರಿಗೆ ಮಾದರಿ ಆದರೆ ಏನು ಗತಿ ಎಂಬುವುದಾಗಿ ಪ್ರಶ್ನಿಸಿದರು.