ಬೆಂಗಳೂರು, ಅ. 04(DaijiworldNews/AK):ಮೈಸೂರು ದಸರಾ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೇವಲ ಮುಡಾ ವಿಚಾರದ ಜಪ ಮಾಡುತ್ತ ತಾವು ಮಾಡಿದ ತಪ್ಪುಗಳನ್ನು ಇಲ್ಲ, ಇಲ್ಲ ಎಂಬ ರೀತಿ ಭಾಷಣ ಮಾಡಿದ್ದಾರೆ.ಜೊತೆಯಲ್ಲಿ ಇರುವವರನ್ನು ಪ್ರೇರೇಪಿಸಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಇದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಇದೊಂದು ನಾಚಿಕೆಗೇಡಿನ ಸಂಗತಿ. ಇಂಥ ವೇದಿಕೆಗಳನ್ನು ತಮ್ಮ ರಾಜಕೀಯ ತೆವಲನ್ನು ತೀರಿಸಿಕೊಳ್ಳಲು ಬಳಸಿಕೊಳ್ಳಬಾರದು. ರಾಜ್ಯ- ಕನ್ನಡಕ್ಕೆ ಕೊಡುಗೆ ಕೊಟ್ಟ ಮುತ್ಸದ್ಧಿಗಳಿಂದ ದಸರಾ ಉತ್ಸವ ಉದ್ಘಾಟಿಸಬೇಕು ಎಂದು ಆಗ್ರಹಿಸಿದರು.
ದಸರಾ ಸಡಗರ ನಿನ್ನೆಯಿಂದ ಪ್ರಾರಂಭವಾಗಿದೆ. ಮೈಸೂರಿನ ವೈಭವ, ಮೈಸೂರು ರಾಜರ ಕೊಡುಗೆ, ರಾಜ್ಯದ ಇತಿಹಾಸ ಸ್ಮರಣೆ, ಚಾಮುಂಡಿ ತಾಯಿಯ ವಿಚಾರ ಸ್ಮರಿಸಬೇಕಿತ್ತು ಎಂದು ಅವರು ನುಡಿದರು.ಕಾಂಗ್ರೆಸ್ಸಿನ ಪ್ರಮುಖರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ ಅವರು ಪತ್ರಿಕಾಗೋಷ್ಠಿ ಮಾಡಿದ್ದರು. ಅವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಆರ್.ಅಶೋಕ್ ಅವರು ವಿಪಕ್ಷ ನಾಯಕರಾಗಿದ್ದು, ಹಿಂದೆ ಆದ ಘಟನೆಯನ್ನು ತೆಗೆದು ಅವರು ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ. ಸತ್ತು ಹೋದ ಕಥೆಯನ್ನು ತೆಗೆದು ಏನು ರಾಜೀನಾಮೆ ಕೇಳುತ್ತೀರಿ? ಮುಡಾ ಕೇಸಿಗೂ ಈ ಮುಗಿದು ಹೋದ ಕಥೆಗೂ ನೀವು ತಾಳೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು. ಇಷ್ಟು ದೊಡ್ಡ ನಾಯಕರಾಗಿ ನಿಮಗೆ ಇದರ ಅರಿವಾಗಲಿಲ್ಲವೇ ಎಂದು ಕೇಳಿದರು.
ಇದು ಸರಿಯಾದ ರೀತಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದ ಅವರು, ಮುಡಾ ಕೇಸಿನಲ್ಲಿ ತನಿಖೆಗೆ ಎರಡು ಕೋರ್ಟ್ಗಳ ಆದೇಶ ಆಗಿದೆ. ಇ.ಡಿ. ಈಗಾಗಲೇ ಅದರಲ್ಲಿ ಎಂಟ್ರಿ ಆಗಿದೆ. ನೀವು ಸೈಟ್ಗಳನ್ನು ವಾಪಸ್ ಕೊಟ್ಟರೂ ಒಂದೇ; ಕೊಡದಿದ್ದರೂ ಒಂದೇ. ಮುಡಾದವರು ಈ ಸೈಟ್ಗಳನ್ನು ವಾಪಸ್ ಪಡೆಯಬಾರದಿತ್ತು ಎಂದು ತಿಳಿಸಿದರು. ಕೋರ್ಟಿನಲ್ಲಿರುವಾಗ ಮುಡಾ ಮಾಡಿರುವುದು ಕೂಡ ತಪ್ಪೇ ಆಗಿದೆ ಎಂದರು.