ನವದೆಹಲಿ,ಅ. 04(DaijiworldNews/AK): ಇದೇ ಅಕ್ಟೋಬರ್ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.ಇದೇ ಅಕ್ಟೋಬರ್ 15 ಮತ್ತು 16ರಂದು ಪಾಕಿಸ್ತಾನವು ಇಸ್ಲಾಮಾಬಾದ್ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಆಯೋಜಿಸುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಪಾಕ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಒಳಗೊಂಡಿರುವ SCO, ಪ್ರಭಾವಿ ಆರ್ಥಿಕ ಮತ್ತು ಭದ್ರತಾ ಸಂಸ್ಥೆಯಾಗಿದೆ. ಈ ಪ್ರಮುಖ ಪ್ರಾದೇಶಿಕ ಗುಂಪಿನ ಭಾಗವಾಗಿ, ಪಾಕಿಸ್ತಾನ ಮತ್ತು ಭಾರತ ಎರಡೂ ಶೃಂಗಸಭೆ ಸಭೆಗಳನ್ನು ನಡೆಸಬಹುದು. ಭಾರತ ಕಳೆದ ವರ್ಷ SCO ಶೃಂಗಸಭೆಯನ್ನು ಆಯೋಜಿಸಿತ್ತು, ಈ ಶೃಂಗಸಭೆಯನ್ನು ವರ್ಚುವಲ್ ಮೋಡ್ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ಭಾಗವಹಿಸಿದ್ದರು.