ಕುಪ್ವಾರ, ಅ.05(DaijiworldNews/AA): ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸೇನೆಯ ಚಿನಾರ್ ಕಾರ್ಪ್ಸ್, ಭಯೋತ್ಪಾದಕರು ಒಳನುಸುಳುವಿಕೆ ಯತ್ನ ನಡೆಸಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದ ಹಿನ್ನೆಲೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಪ್ವಾರದ ಗುಗಲ್ಧರ್ನಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕರ ಹಿಮ್ಮೆಟ್ಟಲು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಭಯೋತ್ಪಾಕರು ಹತ್ಯೆಗೀಡಾಗಿದ್ದಾರೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಪ್ರತಿಯಾಗಿ ಭಯೋತ್ಪಾದಕರೂ ಗುಂಡಿನ ದಾಳಿ ನಡೆಸಿದ್ದಾರೆ. ಇದೀಗ ಕಾರ್ಯಚರಣೆಯಲ್ಲೇ ಸೇನೆ ತೋಡಗಿಸಿಕೊಂಡಿದೆ ಎಂದು ತಿಳಿಸಿದೆ.
ನಿನ್ನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿರುವುದು ನಿಜ ಎಂದು ಅಧಿಕಾರಿಗಳು ಇದೀಗ ಸ್ಪಷ್ಟ ಪಡಿಸಿದ್ದಾರೆ. ಭಯೋತ್ಪಾದಕರು ಭಾರತದ ಗಡಿಯೊಳಗೆ ಬಂದಿದ್ದಾರೆ ಎಂದು ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆ ಈ ದಾಳಿ ನಡೆಸಿದೆ. ಕಿಶ್ತ್ವಾರ್ ಜಿಲ್ಲೆಯ ಚತ್ರೂ ಗ್ರಾಮದಲ್ಲಿ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆಯನ್ನು ಈಗಾಗಲೇ ಆರಂಭಿಸಲಾಗಿದೆ.