ರಾಯ್ಪುರ, ಅ.05(DaijiworldNews/AA): ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶಗಳಾದ ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದೆ. ಈ ಎನ್ಕೌಂಟರ್ನಲ್ಲಿ 35 ನಕ್ಸಲರು ಮೃತಪಟ್ಟಿದ್ದು, ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ದಾಂತೇವಾಡದ ಬರ್ಸೂರಿನ ತುಳತುಳಿ ಗ್ರಾಮ ಮತ್ತು ನಾರಾಯಣಪುರದ ಓರ್ಚಾದ ನೆಂದೂರು ಗ್ರಾಮದ ಅರಣ್ಯದಲ್ಲಿ ನಕ್ಸಲರು ಇರುವ ಖಚಿತ ಮಾಹಿತಿ ಮೇರೆಗೆ ಭದ್ರತಾಪಡೆಗಳು ಶೋಧ ಕಾರ್ಯ ಪ್ರಾರಂಭಿಸಿದವು. ಈ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದೆ.
ನಾರಾಯಣಪುರ-ದಾಂತೇವಾಡ ಗಡಿ ಪ್ರದೇಶದಲ್ಲಿ ಬಸ್ತಾರ್ ಪ್ರದೇಶದ ಉನ್ನತ ನಕ್ಸಲೀಯರ ಸಭೆಯ ಬಗ್ಗೆ ಮಾಹಿತಿ ಲಭಿಸಿತು. ಈ ಹಿನ್ನೆಲೆ ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲಾಯಿತು. ಶುಕ್ರವಾರ ಮಧ್ಯಾಹ್ನದಿಂದ ಎನ್ಕೌಂಟರ್ ಆರಂಭವಾಗಿ ತಡರಾತ್ರಿಯವರೆಗೂ ಮುಂದುವರೆಯಿತು. ಶನಿವಾರ ಬೆಳಗ್ಗೆಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 35 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭಿಸಿದೆ.
ಎನ್ಕೌಂಟರ್ನಲ್ಲಿ ಎಲ್ಲಾ ಯೋಧರು ಸುರಕ್ಷಿತವಾಗಿದ್ದಾರೆ. ಇದೇ ವೇಳೆ ನಕ್ಸಲರಿಂದ ಎಲ್ಎಂಜಿ ರೈಫಲ್, ಎಕೆ 47 ರೈಫಲ್, ಎಸ್ಎಲ್ಆರ್ ರೈಫಲ್, ಐಎನ್ಎಸ್ ಎಎಸ್ ರೈಫಲ್, 303 ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.