ಹುಬ್ಬಳ್ಳಿ, ಅ.05(DaijiworldNews/AK): ಪಾಕಿಸ್ತಾನ ಪ್ರಜೆ ಸೇರಿದಂತೆ ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್ಪೋರ್ಟ್ ಮಾಡಿಕೊಳ್ಳುತ್ತಾರೆ ಅಂದ್ರೆ ಎಲ್ಲೋ ಒಂದು ಕಡೆ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಆರೋಪ ಮಾಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಸಂಸದೆಯಾಗಿದ್ದಾರೆ. ಪುತ್ರಿಗೆ ಕ್ವಾರ್ಟರ್ಸ್ ಬೇಕು ಅನ್ನೋ ಕಾರಣಕ್ಕೆ ದೆಹಲಿಗೆ ಹೋಗಿದ್ದರು ಎಂದು ಹೇಳಿದರು.
ಮುಡಾ ಹಗರಣ ಸಂಬಂಧ ಬಿಜೆಪಿ ಎರಡನೇ ಹಂತದ ಹೋರಾಟ ನಡೆಸಲು ಮುಂದಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ಪ್ರತಿಪಕ್ಷದವರು ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕು. ಇದನ್ನು ಬಿಟ್ಟು ಅವರು ರಾಜಕಾರಣ ಮಾಡುತ್ತಿದ್ದಾರೆ. ಮುಡಾ ಹಗರಣ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ, ತನಿಖೆ ನಡೆಯುತ್ತಿದೆ. ಇಡಿ ನೋಟಿಸ್ ಕೊಟ್ಟಿದೆ ಎಂದರು.