ಕೊಲ್ಹಾಪುರ, ಅ.05(DaijiworldNews/AK):ಮಹಾರಾಷ್ಟ್ರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಕಾಂಗ್ರೆಸ್ ಪಕ್ಷವು ಮೀಸಲಾತಿ ಮಿತಿಯನ್ನು ಹೆಚ್ಚಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶೇ. 50ರಷ್ಟು ಮೀಸಲಾತಿಯ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೊಲ್ಹಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸರ್ಕಾರವು ರಾಜ್ಯದಲ್ಲಿ ಜಾತಿ ಗಣತಿಯನ್ನು ಸಹ ನಡೆಸುತ್ತದೆ. ವಿವಿಧ ಜಾತಿಗಳ ಜನಸಂಖ್ಯೆ ಮತ್ತು ಅವರ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೆಲಸ ಮಾಡುತ್ತದೆ. ಇವುಗಳ ಹೊರತಾಗಿ ಮಹಾರಾಷ್ಟ್ರದ ದಲಿತರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಕುರಿತು ಅಧ್ಯಯನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಯಾವುದೇ ಶಕ್ತಿಯು ಇದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ಅಂಗೀಕರಿಸಿ ಕಾನೂನು ರೂಪಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.