ಬೆಂಗಳೂರು, 10(DaijiworldNews/AK): ಮುಂಬರುವ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಗಳು ಆಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಸಂಚಲನ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ ಎಂದು ನುಡಿದರು.
ದಸರಾ ಬಳಿಕ ಮುಖ್ಯಮಂತ್ರಿ ಬದಲಾವಣೆ ಎಂದು ಹೇಳಿದ್ದೀರಲ್ಲ ಎಂಬ ಪ್ರಶ್ನೆಗೆ ಕ್ಷಿಪ್ರ ರಾಜಕೀಯ ಬದಲಾವಣೆ ಆಗಲಿದೆ ಎಂದು ಹೇಳಿದ್ದೇನೆ; ಅದೆಲ್ಲವೂ ಸೇರಿಕೊಂಡಿವೆ ಎಂದು ತಿಳಿಸಿದರು.
ಪಕ್ಷದ ಹಿರಿಯರಿಗೆ ನನ್ನನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು. ಹಾಗಾಗಿ ನಮ್ಮ ಪಕ್ಷದವರ ಹೇಳಿಕೆಗಳನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸುವುದು ತಪ್ಪಾಗುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದೇನೆ. ಸ್ವಲ್ಪ ಸಮಯ ಬೇಕಾಗುತ್ತದೆ. ಬರುವ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಈ ಕುರಿತು ಪ್ರಶ್ನೆಗೆ ಉತ್ತರ ಕೊಟ್ಟರು.
ಹುಕ್ಕೇರಿ ಹಿರೇಮಠದ ಪರಮಪೂಜ್ಯ ಷಟಸ್ಥಳ ಬ್ರಹ್ಮ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ದಸರಾ ಶುಭ ಸಂದರ್ಭದಲ್ಲಿ ಇವತ್ತು ಚಂಡಿಕಾ ಹೋಮ ನಡೆಸಲಾಗಿದೆ. ಪರಮಪೂಜ್ಯರು ನಮ್ಮ ತಂದೆ ಯಡಿಯೂರಪ್ಪನವರ ಬಗ್ಗೆ ಮತ್ತು ನಮ್ಮ ಕುಟುಂಬದ ಕುರಿತು ಯಾವತ್ತೂ ಒಳಿತನ್ನು ಬಯಸಿದವರು. ನಾಡಿಗೆ ಬೆಳಕು ಚೆಲ್ಲುವ ಶಕ್ತಿ ಪರಮಪೂಜ್ಯರಲ್ಲಿದೆ ಎಂದರು.
ದಸರಾ ಶುಭ ಸಂದರ್ಭದಲ್ಲಿ ನಾನು ಶ್ರೀಮಠಕ್ಕೆ ಭೇಟಿ ಕೊಟ್ಟಿದ್ದು, ಪೂಜೆಯಲ್ಲಿ ಭಾಗವಹಿಸಿದ್ದೇನೆ ಎಂದರು. ಕಳೆದ ಬಾರಿ ಉಪಾಧ್ಯಕ್ಷರಿದ್ದ ನಿಮಗೆ ಅಜ್ಜಾವ್ರು ಅಧ್ಯಕ್ಷರಾಗಲು ಆಶೀರ್ವಾದ ಮಾಡಿದ್ದರು; ಈ ಬಾರಿ ಏನೆಂದು ಆಶೀರ್ವಾದ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ನಾಡಿಗೆ ಒಳ್ಳೆಯದಾಗಲಿ ಎಂದು ಅಜ್ಜಾವ್ರು ಯಾವಾಗಲೂ ಬಯಸುತ್ತಾರೆ. ಸಮಾಜಕ್ಕೆ ಒಳಿತಾಗಬೇಕು; ನಮ್ಮ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ಸಮಾಜದ ಮುಂಚೂಣಿಯಲ್ಲಿರುವ ಯಾರೇ ಮುಖಂಡರಿದ್ದರೂ ಸಹ ಅವರಿಗೆ ಭಗವಂತ ಸದ್ಬುದ್ಧಿ ಕೊಟ್ಟು ಒಳ್ಳೆ ದಾರಿಯಲ್ಲಿ ಹೋಗಲಿ ಎಂಬ ಆಶೀರ್ವಾದ ಪೂಜ್ಯರದು. ಇವತ್ತು ಕೂಡ ಧೈರ್ಯವಾಗಿ ಮುನ್ನುಗ್ಗು ಎಂದು ಆಶೀರ್ವಾದ ಮಾಡಿದ್ದಾರೆ’ ಎಂದು ತಿಳಿಸಿದರು.