ಹುಬ್ಬಳ್ಳಿ, ಅ.11(DaijiworldNews/AA): ಗರೀಬ್ ಕಲ್ಯಾಣ ಮತ್ತು ಅಂತ್ಯೋದಯ ಅನ್ನ ಯೋಜನೆಯಡಿ ವಿತರಿಸುವ ಅಕ್ಕಿಗೆ ಇನ್ನು ಮುಂದೆ ಶೇ.1ರಷ್ಟು ಪೌಷ್ಟಿಕಾಂಶವನ್ನು ಸೇರಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿಗೆ ಪೌಷ್ಟಿಕಾಂಶ ಸೇರಿಸಿ ಸಾರವರ್ಧಿತ ಅಕ್ಕಿ ತಯಾರಿಸಿ ವಿತರಿಸಲು ಕೇಂದ್ರ ಕ್ರಮ ಕೈಗೊಂಡಿದೆ. ರಕ್ತಹೀನತೆಯನ್ನು ಹೋಗಲಾಡಿಸಲು ಪೌಷ್ಟಿಕಾಂಶಯುಕ್ತ, ಸಾರವರ್ಧಿತ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, 5 ವರ್ಷಗಳ ಕಾಲ ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ವಿತರಿಸುತ್ತಿದ್ದು, ಇದಕ್ಕೆ ಶೇ.1 ರಷ್ಟು ಪೌಷ್ಟಿಕಾಂಶಗಳನ್ನು ಸೇರಿಸಿ, ಬಲವರ್ಧಿತ ಅಕ್ಕಿಯಾಗಿ ವಿತರಿಸಲಾಗುವುದು. ದೇಶಾದ್ಯಂತ ಈ ಪೌಷ್ಟಿಕಾಂಶಯುಕ್ತ ಅಕ್ಕಿ ವಿತರಣೆಗೆ 18 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಕಡುಬಡವರನ್ನು ರಕ್ತಹೀನತೆಯಿಂದ ಕಾಪಾಡಲು ಪ್ರಯೋಜನವಾಗಲಿದೆ ಎಂದು ತಿಳಿಸಿದರು.