ಬೆಂಗಳೂರು, ಅ. 11(DaijiworldNews/AK):ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಎಷ್ಟು ಹಣವನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದರು ಎಂಬ ಅಂಕಿಅಂಶ ಬಿಡುಗಡೆ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಹಣವನ್ನು ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಬಿಡುಗಡೆ ಮಾಡಿದ್ದೀರೆಂದು ಅಂಕಿಅಂಶ ಕೊಡಬೇಕು. ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಕೇಂದ್ರ ಸರಕಾರವು ಎಷ್ಟು ಹಣಕಾಸು ನೀಡಿದೆ ಎಂಬುದನ್ನು ನಾವೂ ಬಿಡುಗಡೆಗೊಳಿಸಲು ಸಿದ್ಧ ಎಂದು ಸವಾಲು ಹಾಕಿದರು.
ನಮ್ಮ ಸರಕಾರವು ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷದ ಸರಕಾರಕ್ಕಿಂತ ಹೆಚ್ಚು ಹಣ ನೀಡಿದೆ. ಯಾವುದೇ ಅನ್ಯಾಯ ಆಗಿಲ್ಲ ಎಂದು ತಿಳಿಸಿದರು.
ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ಕೊಡುವ ಹಣವನ್ನು ಹೋಲಿಸಿ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ರಾಜ್ಯ ಕೇಳುವ ಮಾತನಾಡಿದ್ದಾರೆ. ತೆರಿಗೆ ಪಾಲು ಕೊಡುವುದರಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.ಡಿ.ಕೆ.ಸುರೇಶ್ ಮಾಡುವ ಆರೋಪ ಸರಿಯಲ್ಲ; ಇದು ಖಂಡನೀಯ ಎಂದರು.
ಕೇಂದ್ರದಲ್ಲಿ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ. ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರಕಾರ ಇದ್ದಾಗ ಕರ್ನಾಟಕಕ್ಕೆ ಎಷ್ಟು ತೆರಿಗೆ ಪಾಲು ಕೊಡುತ್ತಿದ್ದರು; ಎಷ್ಟು ಹಣ ಕೊಡಲಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕವೂ ಒಂದೇ, ಬಿಹಾರವೂ ಒಂದೇ, ಕರ್ನಾಟಕವೂ ಒಂದೇ, ಒಡಿಶಾವೂ ಒಂದೇ, ಕರ್ನಾಟಕವೂ ಒಂದೇ, ಉತ್ತರ ಪ್ರದೇಶವೂ ಒಂದೇ ಎಂಬಂತೆ ಕೇಂದ್ರದ ಆಗಿನ ಸರಕಾರಗಳು ನಡೆದುಕೊಳ್ಳುತ್ತಿದ್ದವು ಎಂದರು.
ಕ್ಯಾಬಿನೆಟ್ ನಿರ್ಣಯ- ತೀವ್ರ ಆಕ್ಷೇಪ
ದುಷ್ಟ ಶಕ್ತಿಗಳ ವಿರುದ್ಧ ಸತ್ಯಕ್ಕೆ ಜಯ ಎಂದು ಪೇಪರ್ನಲ್ಲಿ ನೋಡಿದ್ದೇನೆ. ದುಷ್ಟ ಶಕ್ತಿಗಳು ಯಾರು? ಹುಬ್ಬಳ್ಳಿಯಲ್ಲಿ 16-4-2022ರಂದು ಕಿಡಿಗೇಡಿಯೊಬ್ಬ ಒಂದು ವಾಟ್ಸಪ್ ಮೆಸೇಜ್ನಲ್ಲಿ ಇಸ್ಲಾಂ ಧರ್ಮಕ್ಕೆ ಅವಹೇಳನ ಮಾಡಿದ್ದಾನೆಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರು ಆತನನ್ನು ಬಂಧಿಸಿದ್ದರು. ಅವನನ್ನು ತಮ್ಮ ಕೈಗೆ ಒಪ್ಪಿಸಲು ಆಗ್ರಹಿಸಿ, ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದರು. ಎಲ್ಲ ಅಲ್ಪಸಂಖ್ಯಾತರ ಬಗ್ಗೆ ಈ ಮಾತಲ್ಲ ಎಂದರು.