ಧಾರವಾಡ, ಅ. 11(DaijiworldNews/AK): ಯಾವ ಪ್ರಕರಣ ವಾಪಸ್ ಪಡೆಯಬೇಕು, ಯಾವ ಪ್ರಕರಣ ವಾಪಸ್ ಪಡೆಯಬಾರದು ಎಂಬುದು ಸರ್ಕಾರಕ್ಕೆ ತಿಳಿಯಬೇಕಿತ್ತು. ಗೂಂಡಾಗಿರಿ ಮಾಡಿದವರ ಕೇಸನ್ನು ಈ ಸರ್ಕಾರ ವಾಪಸ್ ಪಡೆದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಕೇಸ್ ವಾಪಸ್ ಪಡೆಯುವುದು ಸಹಜ. ರೈತರ ಹೋರಾಟದ ಕೇಸ್ಗಳನ್ನು ವಾಪಸ್ ಪಡೆದರೆ ಸರಿ. ಆದರೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರ ಕೇಸುಗಳನ್ನು ವಾಪಸ್ ಪಡೆದಿದ್ದು ಸರಿಯಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಿದಂತಾಗುತ್ತದೆ ಎಂದರು.
ಈ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು. ಅವರಿಗೆ ಮತ್ತಷ್ಟು ಪ್ರೋತ್ಸಾಹ ಕೊಡಲು ಈ ರೀತಿ ಮಾಡಲಾಗುತ್ತಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ಹೇಳಿದರು.