ಬೆಳಗಾವಿ, ಅ.12(DaijiworldNews/AA): ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ರೀತಿಯ ಆಪರೇಷನ್ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್ ನ ಸ್ವಯಂಕೃತ ಅಪರಾಧದಿಂದ ಸರ್ಕಾರ ಬಿದ್ದು ಹೋಗಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿಯ ತಮ್ಮ ನೂತನ ಕಚೇರಿಯಲ್ಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನಾಲ್ಕು ದಿನ ವಿಳಂಬ ಆಗಬಹುದು. ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಹೊಸ ಸಿಎಂ ಯಾರು ಅನ್ನೋದು ಕಾಂಗ್ರೆಸ್ಗೆ ಬಿಟ್ಟ ವಿಚಾರ. ಈಗಾಗಲೇ 8 ಜನ ಸಿಎಂ ಆಗಲೂ ತಯಾರಿದ್ದಾರೆ. ಅವರಲ್ಲಿ ಆಂತರಿಕ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ ಆದ ದಿನದಿಂದಲೇ ಒಳ ಜಗಳ ಇದೆ. ಆ ಒಳಜಗಳದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ತಿಳಿಸಿದರು.
ಚಳಿಗಾಲದ ಅಧಿವೇಶನಕ್ಕೆ ಹೊಸ ಸಿಎಂ ಬರ್ತಾರೆ ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಾಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅವರಿಗೆ ಬಿಟ್ಟ ವಿಚಾರ. ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ, ಮುಡಾ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ತಪ್ಪು ಮಾಡಿರೋದು ಗೊತ್ತಿದೆ. ಲೋಕಾಯುಕ್ತ ತನಿಖೆ ಆಗ್ತಿದೆ. ಇಷ್ಟಾದ್ರು ಸಿಎಂ ಆಗಿ ಮುಂದುವರೆದಿರೋ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಇದು ಬಂಡತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಡಾ ಹಗರಣದಲ್ಲಿ ರಾಜೀನಾಮೆ ಕೊಡುವಂತೆ ಹೇಳಿದರೆ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ರಾಜೀನಾಮೆ ವಿಚಾರ ಚರ್ಚೆ ನಡೆಯುತ್ತಿದೆ. ಒಂದೊಂದೇ ವಿಷಯಗಳನ್ನ ತೆಗೆದುಕೊಂಡು ಬರುತ್ತಿದ್ದಾರೆ. ಜಾತಿಗಣತಿಯ ವರದಿ ಕ್ಯಾಬಿನೆಟ್ನಲ್ಲಿ ಸಲ್ಲಿಸುತ್ತೇವೆ ಎಂದರು. ಈಗ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೋರಾಟದ ಹಿನ್ನೆಲೆ ಇರುವ ಕೇಸ್ ನಾವು ವಾಪಸ್ ಪಡೆದಿದ್ದೇವೆ. ರೈತರ ಮಹದಾಯಿ ಹೋರಾಟ ಕೇಸ್ ಯಾಕೆ ವಾಪಸ್ ತೆಗೆದುಕೊಳ್ಳಲಿಲ್ಲ. ಮಹದಾಯಿ ವಿಚಾರದಲ್ಲಿ ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.