ಪಂಜಾಬ್, ಅ.13(DaijiworldNews/TA):ಡಾ.ಸಲೋನಿ ಸಿದೇನಾ ಐಎಎಸ್ ತನ್ನ ವೈದ್ಯಕೀಯ ವೃತ್ತಿ ತೊರೆದು ನಂತರ ಐಎಎಸ್ ಅಧಿಕಾರಿಯಾಗಿ ಜನಸೇವೆಯಲ್ಲಿ ತೊಡಗಿದರು. ಅವರ ಹಾದಿ ಅಷ್ಟೊಂದು ಸುಲಭಕರವಾದುದಾಗಿರಲಿಲ್ಲ.
ತರಬೇತಿಯ ಸಹಾಯವಿಲ್ಲದೆ ಯುಪಿಎಸ್ ಸಿಇಎಸ್ ನಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಜಯಗಳಿಸಿದ ಆಕೆಯ ಯಶಸ್ಸಿಗೆ ಅವರ ಕಠಿಣ ಪರಿಶ್ರಮವೇ ಸಾಕ್ಷಿ. ಆ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ಪಂಜಾಬ್ನ ಜಲಾಲಾಬಾದ್ ಮೂಲದ ಡಾ.ಸಲೋನಿ ಸಿದೇನಾ ಅವರು ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನವನ್ನು ಮುಂದುವರಿಸಲು ವೈದ್ಯಕೀಯ ವೃತ್ತಿಯನ್ನು ಬಿಟ್ಟು ಮಹತ್ವದ ಜೀವನದ ನಿರ್ಧಾರ ಕೈಗೊಂಡಿದ್ದರು. ತನ್ನ ತಂದೆಯ ಬಹುಕಾಲದ ಮಹತ್ವಾಕಾಂಕ್ಷೆಯನ್ನು ಪೂರೈಸಲು ವೈದ್ಯನಾಗಿ ಲಾಭದಾಯಕ ವೃತ್ತಿಜೀವನವನ್ನು ತ್ಯಜಿಸಿದರು.
ಸಲೋನಿ ಸಿದೇನಾ ಅವರ ತಂದೆಗೆ ಮಗಳನ್ನು ಐಎಎಸ್ ಅಧಿಕಾರಿಯಾಗಿ ನೋಡಬೇಕೆಂಬ ಉತ್ಕಟ ಬಯಕೆ ಇತ್ತು. ಅವರ ಆಶಯದ ಗೌರವಾರ್ಥವಾಗಿ, ಸಲೋನಿ ಅವರು ತನ್ನ ವೈದ್ಯಕೀಯ ಜೀವನವನ್ನು ತೊರೆದು ಯುಪಿಎಸ್ಸಿ ಯಶಸ್ಸಿನ ಕಡೆಗೆ ಪ್ರಯಾಸಕರ ಹಾದಿಯನ್ನು ಪ್ರಾರಂಭಿಸಿದರು.
ಸಲೋನಿಯ ಬಾಲ್ಯದ ಆಕಾಂಕ್ಷೆಗಳು ಕೇವಲ ವೈದ್ಯಳಾಗುವ ಮತ್ತು ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸುವ ಸುತ್ತ ಸುತ್ತುತ್ತಿದ್ದವು. NEET ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾದ ನಂತರ, ಅವರು ದೆಹಲಿಯ ಗೌರವಾನ್ವಿತ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ MBBS ಪ್ರವೇಶಾತಿಯನ್ನು ಪೆಡೆದರು.
ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಕನಸುಗಳನ್ನು ಹೊಂದಿದ್ದರೂ ಸಹ, ಸಲೋನಿ ತನ್ನ ತಂದೆಯ ಸಲಹೆಯನ್ನು ಪಾಲಿಸಿದರು ಮತ್ತು ಯುಪಿಎಸ್ಸಿ ಪರೀಕ್ಷೆಯ ಕಡೆಗೆ ತನ್ನ ಗಮನವನ್ನು ಹರಿಸಿದರು. 2014ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 74ನೇ ರ್ಯಾಂಕ್ ಪಡೆದರು. ಈ ಮೂಲಕ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.