ಬೆಂಗಳೂರು,ಜೂ02(DaijiworldNews/AZM): ಪಕ್ಷೇತರ ಶಾಸಕರಿಬ್ಬರನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟಕ್ಕೆ ಸೇರಿಸಿಕೊಳ್ಳುವುದು ಖಚಿತವಾಗಿದೆ.
ಸಂಪುಟ ವಿಸ್ತರಣೆ ಸಧ್ಯದಲ್ಲೇ ನಡೆಯಲಿದ್ದು,ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಪುಟ ವಿಸ್ತರಣೆ ಸಂಬಂಧ ಗಂಭೀರ ಚರ್ಚೆ ನಡೆಸಿದ್ದಾರೆ. ಹಾಗೂ ಪಕ್ಷೇತರ ಶಾಸಕರಾದ ಶಂಕರ ಮತ್ತು ನಾಗೇಶ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಭಾರೀ ಹಿನ್ನೆಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಆಡಳಿತ ಪಕ್ಷದ ಶಾಸಕರು ಒಳಗಾಗುವುದನ್ನು ತಪ್ಪಿಸಲು ಮತ್ತು ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸಲು ಉಭಯ ಪಕ್ಷಗಳ ನಾಯಕರು ಕಾರ್ಯತಂತ್ರವನ್ನು ರೂಪಿಸಿದ್ದಾರೆ.
ಅದರ ಭಾಗವಾಗಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆಯ ಮುಹೂರ್ತ ನಿಗಧಿಪಡಿಸಲಾಗುತ್ತದೆ. ಉನ್ನತ ಮೂಲಗಳ ಪ್ರಕಾರ ಮುಂದಿನ ಬುಧವಾರ ಇಲ್ಲವೇ ಗುರುವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನ ಹಾಗೂ ಕಾಂಗ್ರೆಸ್ ಪಾಲಿನ ಒಂದು ಸಚಿವ ಸ್ಥಾನ ಬಾಕಿ ಉಳಿದಿದ್ದು, ಮೈತ್ರಿ ಸರ್ಕಾರವನ್ನು ಭದ್ರ ಪಡಿಸಿಕೊಳ್ಳಲು ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗುತ್ತದೆ.
ಈ ಸಂಬಂಧ ಆ ಇಬ್ಬರು ಶಾಸಕರೊಂದಿಗೆ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದು ಸಚಿವ ಸ್ಥಾನವನ್ನು ಅತೃಪ್ತ ಶಾಸಕರಲ್ಲಿ ಪ್ರಮುಖರಾಗಿರುವ ರಮೇಶ್ ಜಾರಕಿಹೊಳಿ ಅಥವಾ ಬಿ.ಸಿ.ಪಾಟೀಲ್ ಅವರಿಗೆ ನೀಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಮೇಶ್ ಮತ್ತೆ ಸಚಿವರಾಗಲು ಒಪ್ಪದಿದ್ದರೆ. ಬಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಸಂಪುಟ ವಿಸ್ತರಣೆಯಾದ ನಂತರ ಎರಡನೇ ಹಂತದಲ್ಲಿ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ.