ಬೆಂಗಳೂರು, ಅ.13(DaijiworldNews/AK):ರಾಜ್ಯದ್ದು ಹಿಂದೂಗಳ ವಿರೋಧಿ ಸರಕಾರ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಒಂದು ಸಾಂಕೇತಿಕ ಪ್ರತಿಭಟನೆ ಇದು ಎಂದು ವಿಜಯೇಂದ್ರ ಅವರು ತಿಳಿಸಿದರು. ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ, ದಾಳಿ ಮಾಡಿದ್ದ, ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿಂದಕ್ಕೆ ಪಡೆದಿದೆ ಎಂದು ಟೀಕಿಸಿದರು.
ಹುಬ್ಬಳ್ಳಿ ಘಟನೆ ವಿಷಯದಲ್ಲಿ ಎನ್ಐಎ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಎಂದು ಯಾವ ಮಟ್ಟಕ್ಕೆ ಹೋಗಲು ಕೂಡ ಕಾಂಗ್ರೆಸ್ ಸರಕಾರ ಹೇಸುವುದಿಲ್ಲ ಎಂದು ದೂರಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ತಿಳಿಸಿದರು. ಸಿದ್ದರಾಮಯ್ಯನವರು, ವಿಜಯೇಂದ್ರ ಭವಿಷ್ಯ ಹೇಳುತ್ತಾರಾ ಎಂದು ಪ್ರಶ್ನಿಸಿದ್ದನ್ನು ನೆನಪಿಸಿದರು.ಸಿದ್ದರಾಮಯ್ಯನವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿ ಎಂದು ನಿಮ್ಮ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ವಿಜಯೇಂದ್ರರು ಸವಾಲೆಸೆದರು.
ಖರ್ಗೆಯವರು ಇಂಥ ಹೇಳಿಕೆ ಕೊಡುತ್ತಿಲ್ಲ. ರಾಜ್ಯ ರಾಜಕಾರಣದ ಕುರಿತು ಮಾತನಾಡದೇ ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಹೋರಾಟದ ಬಳಿಕ ಮುಡಾ ಹಗರಣದಲ್ಲಿ ಕದ್ದ ಮಾಲನ್ನು ವಾಪಸ್ ಕೊಡಲು ಸಿದ್ದರಾಮಯ್ಯನವರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ಪಾಪದ ಕೊಡ ತುಂಬಿದೆ. ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.