ಬೆಂಗಳೂರು, ಅ.16(DaijiworldNews/AK): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಮರೀಗೌಡ ಅವರು ಬುಧವಾರ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪ ಚೋಳನ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು.
ರಾಜೀನಾಮೆ ಬಳಿಕ ಮಾತನಾಡಿದ ಮರೀಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ರು ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಆರೋಗ್ಯವು ಸರಿಯಿಲ್ಲ. ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ತನಿಖೆ ನಡೆಯುತ್ತಿದೆ. ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತಾ ನಾನು ಹೇಳೊಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರುತ್ತೆ ಎಂದು ತಿಳಿಸಿದರು.
ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ ಅಷ್ಟೆ. ಸೈಟ್ ವಿಚಾರವಾಗಿ ಸಿಎಂ ಅವರು ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ ಎಂದರು.