ನವದೆಹಲಿ, ಅ.18(DaijiworldNews/AA): ದೇಶವಾಸಿಗಳಿಗೆ ಅಗತ್ಯ ಪೌಷ್ಟಿಕ ಆಹಾರ ವಿತರಣೆಗಾಗಿ ಕೇಂದ್ರ ಸರ್ಕಾರ ಮಿಲೆಟ್ಸ್ ಖರೀದಿಯನ್ನು ಹೆಚ್ಚಳ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3ನೇ ಅವಧಿ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಮಿಲೆಟ್ಸ್ ಖರೀದಿ ಮಾಡುತ್ತಿದೆ. 2023-24ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಕೇಂದ್ರ ಸರ್ಕಾರ 12.49 ಲಕ್ಷ ಮೆಟ್ರಿಕ್ ಟನ್ ಮಿಲೆಟ್ಸ್ ಖರೀದಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.170ರಷ್ಟು ಮಿಲೆಟ್ಸ್ ಖರೀದಿ ಹೆಚ್ಚಳ ಕಂಡಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 3ನೇ ಅವಧಿಯ ಮೊದಲ 100 ದಿನಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಇತರ ಕಲ್ಯಾಣ ಯೋಜನೆಗಳ ಫಲಾನುಭವಿಗಳಲ್ಲಿ ಪೌಷ್ಟಿಕಾಂಶಕ್ಕೆ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಮಿಲೆಟ್ಸ್ ಖರೀದಿಯಲ್ಲಿನ ಹೆಚ್ಚಳ ಪ್ರಮುಖವಾಗಿದೆ ಎಂದು ಹೆಳಿದರು.